- ಮಂಗಳೂರು
- 3:06 ಅಪರಾಹ್ನ
- ನವೆಂಬರ್ 21, 2023
ಮಂಗಳೂರು : ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ತಾಯ್ನಾಡಿಗೆ ವಾಪಸ್ಸಾದ ಯುವಕ!

ಮಂಗಳೂರು: ತಾನು ಮಾಡದ ತಪ್ಪಿಗೆ ಸೌದಿ ಅರೇಬಿಯಾ (Saudi Arabia) ಜೈಲಿನಲ್ಲಿ 11 ತಿಂಗಳ ಕಾಲ ಸೆರೆವಾಸ ಅನುಭವಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಚಂದ್ರಶೇಖರ್ (Chandrashekhar Kadaba) ಇಂದು ತಾಯ್ನಾಡಿಗೆ ಮರಳಿದ್ದಾರೆ.
ಕೆಲಸಕ್ಕಾಗಿ ತೆರಳಿ ಸೌದಿಯಲ್ಲಿ ನೆಲೆಸಿರುವ ಚಂದ್ರಶೇಖರ್ ಸಿಮ್ ಖರೀದಿಸಿದ್ದ ವೇಳೆ ಅವರ ಬ್ಯಾಂಕ್ ಖಾತೆ ಹ್ಯಾಕ್ ಆಗಿತ್ತು. ಹ್ಯಾಕ್ ಆಗಿದ್ದ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್ ಹಣ ವರ್ಗಾವಣೆ ಆಗಿತ್ತು. ಈ ವರ್ಗಾವಣೆ ಚಂದ್ರಶೇಖರ್ ಅವರೇ ಮಾಡಿದ್ದರು ಎಂದು ಅವರನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.
ಬಳಿಕ ಭಾರತೀಯ ವಿದೇಶಾಂಗ ಇಲಾಖೆ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (MP Nalin Kumar Kateel) ಸೇರಿದಂತೆ ಹಲವರ ಪ್ರಯತ್ನದಿಂದ ಇದೀಗ 11 ತಿಂಗಳ ಬಳಿಕ ಚಂದ್ರಶೇಖರ್ ಬಿಡುಗಡೆಗೊಂಡಿದ್ದಾರೆ. ಇಂದು ರಿಯಾದ್ ನಿಂದ ಮುಂಬೈಗೆ ಬಂದು ಅಲ್ಲಿಂಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಹೊರಬರುತ್ತಿದ್ದಂತೆ ಚಂದ್ರಶೇಖರ್ ಭಾವುಕರಾಗಿದ್ದರು. ಈ ವೇಳೆ ಅವರ ತಾಯಿ ಹೇಮಾವತಿ ಮಗನನ್ನು ಅಪ್ಪಿ ಹಿಡಿದು ಆನಂದ ಭಾಷ್ಪ ಹರಿಸಿದರು.
ಕಾರ್ಮಿಕರ ಮಕ್ಕಳೆಂದು ಲಕ್ಷಾಂತರ ಫೇಕ್ ಕಾರ್ಡ್- ತನಿಖೆಗೆ ಸೂಚಿಸಿದ ಸಂತೋಷ್ ಲಾಡ್
ಉಡುಪಿ: ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕುರಿತಂತೆ ಲಕ್ಷಾಂತರ ಫೇಕ್ ಕಾರ್ಡ್ ಗಳಿರೋದು ಗಮನಕ್ಕೆ ಬಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santhosh Lad) ಮಾಹಿತಿ ಬಹಿರಂಗಪಡಿಸಿದ್ದಾರೆ.
ಉಡುಪಿಯಲ್ಲಿ (Udupi) ಮಾತನಾಡಿದ ಅವರು, ವೇತನ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನ ನಾವು ಕಡಿತ ಮಾಡಿಲ್ಲ. 2021 ರಲ್ಲಿ 2,000 ಇದ್ದ ವಿದ್ಯಾರ್ಥಿ ವೇತನ ಎಂಟು ಸಾವಿರಕ್ಕೆ ಏರಿಸಿದರು. 10,000 ನೀಡುವವರಿಗೆ 30,000 ಕೊಟ್ಟರು. ಮೂವತ್ತು ಸಾವಿರ ಕೊಡುವವರಿಗೆ ಒಂದು ಲಕ್ಷ ರೂ. ಕೊಟ್ಟರು. ಇದು ಅವೈಜ್ಞಾನಿಕ ಕ್ರಮವಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಏಕಾಏಕಿ 39 ಲಕ್ಷ ಕಾರ್ಡ್ ಬೇಡಿಕೆ ಬಂತು.
ಹಾವೇರಿ (Haveri) ಜಿಲ್ಲೆಯಲ್ಲಿ ಮೂರು ಲಕ್ಷ ಕಾರ್ಡುಗಳಿವೆ. ಇದರಲ್ಲಿ ಅನೇಕ ನಕಲಿ ಕಾರ್ಡುಗಳಿವೆ. ಈ ಬಾರಿ 13 ಲಕ್ಷ ಅರ್ಜಿಗಳು ಬಂದಿವೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ 9 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ, ವೈಜ್ಞಾನಿಕ ರೀತಿಯಲ್ಲಿ ಈ ಸಮಸ್ಯೆ ನಿರ್ವಹಿಸುತ್ತೇವೆ ಎಂದರು. ನಿಜವಾದ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸಹಾಯ ಸಿಗಬೇಕು. ಈ ಹಿನ್ನೆಲೆಯಲ್ಲಿ ನಕಲಿ ಕಾರ್ಡ್ ಗಳು ಯಾವುದು ಎಂಬುದನ್ನು ಪತ್ತೆ ಹಚ್ಚುತ್ತೇವೆ. ಅಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ ಎಂದರು.