Mangalore: ರೈಲು ಹಳಿಗಳ ಮೇಲೆ ಕಲ್ಲು ಇಟ್ಟ ಕಿಡಿಗೇಡಿಗಳು!
Mangalore: ರೈಲು ಹಳಿಗಳ ಮೇಲೆ ಕಲ್ಲು ಇಟ್ಟ ಕಿಡಿಗೇಡಿಗಳು, ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲ ರೈಲು ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಜಲ್ಲಿಕಲ್ಲು ಸುರಿದಿರುವ ಘಟನೆ ಬೆಳಕಿಗೆ ಬಂದಿದೆ. ಶನಿವಾರ ತಡರಾತ್ರಿಯಲ್ಲಿ ಕೇರಳಕ್ಕೆ ತೆರಳುತ್ತಿದ್ದ ರೈಲು ಸಂಚರಿಸಿದ ವೇಳೆ ಭಾರಿ ಸದ್ದು ಕೇಳಿ ಬಂದಿತ್ತು. ಕೆಲ ಹೊತ್ತಿನ ಬಳಿಕ ಮತ್ತೊಂದು ರೈಲು ಸಂಚರಿಸುವಾಗಲೂ ಇದೇ ರೀತಿಯ ಸದ್ದು ಕೇಳಿಸಿತ್ತು.
ಇತ್ತೀಚಿನ ದಿನಗಳಲ್ಲಿ ರೈಲು ಹಳಿ ತಪ್ಪಿಸುವ ಯತ್ನಗಳು ಹೆಚ್ಚಾಗುತ್ತಿವೆ. ಅದೃಷ್ಟವಶಾತ್ ಲೊಕೊಪೈಲಟ್ಗಳ ಸಮಯ ಪ್ರಜ್ಞೆಯಿಂದ ಅನಾಹುತಗಳು ತಪ್ಪಿವೆ. ಇದೀಗ ಮಂಗಳೂರಿನಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿದೆ.
ರೈಲುಗಳು ಚಲಿಸುವ ಸಂದರ್ಭದಲ್ಲಿ ದೊಡ್ಡ ಸದ್ದು ಕೇಳಿ ಸ್ಥಳೀಯರಿಗೆ ಆತಂಕ ಉಂಟಾಗಿತ್ತು. ತಡರಾತ್ರಿ ಸುಮಾರಿಗೆ ತೊಕ್ಕೊಟ್ಟುವಿನ ರೈಲ್ವೇ ಹಳಿಯಲ್ಲಿ ಘಟನೆ ನಡೆದಿದೆ. ರೈಲೊಂದು ಕೇರಳ ಕಡೆಗೆ ತೆರಳಿದ ವೇಳೆ ದೊಡ್ಡ ಶಬ್ದ ಕೇಳಿಸಿತ್ತು, ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಕೇಳಿತ್ತು. ಕೆಲವು ಮಂದಿ ಭೂಕಂಪವಾಗಿರಬಹುದು ಎಂದುಕೊಂಡಿದ್ದರು.
ಬಳಿಕ ರೈಲ್ವೆ ಹಳಿ ಕಡೆಯಿಂದ ಶಬ್ದ ಕೇಳಿದ್ದರಿಂದ ಆ ಕಡೆಗೆ ಸ್ಥಳೀಯರು ಬಂದು ಪರಿಶೀಲನೆ ನಡೆಸಿದ್ದಾರೆ, ಆಗ ಹಳಿ ಮೇಲೆ ಜಲ್ಲಿಕಲ್ಲುಗಳನ್ನು ಸುರಿದಿರುವುದು ಕಂಡುಬಂದಿದೆ. ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರ ಮಾಹಿತಿ ನೀಡಲಾಗಿದೆ.
ಇತ್ತೀಚೆಗೆ ಹಲವು ರೈಲು ಅಪಘಾತಗಳು ಸಂಭವಿಸುತ್ತಿದ್ದು, ಇದೂ ಕೂಡ ಅಂತಹ ಒಂದು ಪ್ರಯತ್ನದ ಭಾಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಡುಗೆ ಕೋಣೆಗೆ ಏಕಾಏಕಿ ನುಗ್ಗಿದ ಚಿರತೆ:
ಮೂಲ್ಕಿ : ಮೂಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಏಕಾಏಕಿ ಚಿರತೆ ನುಗ್ಗಿದ ಘಟನೆ ಸಂಭವಿಸಿದೆ. ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬೋನಿನ ಮೂಲಕ ಚಿರತೆಯನ್ನು ಸೆರೆ ಹಿಡಿದು ಜನರ ಆತಂಕವನ್ನು ದೂರ ಮಾಡಿದರು.
ಶನಿವಾರ ರಾತ್ರಿ 9:30 ಸುಮಾರಿಗೆ ಸದಾನಂದ ಕೋಟ್ಯಾನ್ ಅವರ ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ದಿಢೀರನೆ ನುಗ್ಗಿದೆ. ಈ ಸಂದರ್ಭ ಸದಾನಂದ ಕೋಟ್ಯಾನ್ ಅವರ ನಾಯಿ ಬೊಗಳಲು ಶುರು ಮಾಡಿದ್ದು ಸದಾನಂದ ಕೋಟ್ಯಾನ್ ಚಿರತೆಯನ್ನು ನೋಡಿ ಕಂಗಾಲಾಗಿದ್ದಾರೆ.
ಕೂಡಲೇ ಸ್ಥಳೀಯರಾದ ಭಾಸ್ಕರ್ ಕಾಂಚನ್ ಮತ್ತಿತರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಚಿರತೆ ಹಿಡಿಯಲು ಮುಂದಾಗಿ ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿದರು. ಮಧ್ಯ ರಾತ್ರಿ ಸುಮಾರು 2.30 ರ ವೇಳೆಗೆ ಚಿರತೆ ಬೋನಿನೊಳಗೆ ಬಿದ್ದಿದೆ.
ಚಿರತೆಯನ್ನು ನೋಡಲು ಜನರ ದಂಡೇ ಸೇರಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು, ಮೂಲ್ಕಿ ಪೊಲೀಸರು ಮತ್ತು ಸಾರ್ವಜನಿಕರ ಸಹಕಾರದಿಂದ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಅದೃಷ್ಟವಶಾತ್ ಚಿರತೆ ಯಾರಿಗೂ ಯಾವುದೇ ಹಾನಿ ಮಾಡಿಲ್ಲ.
ಮದ್ಯವ್ಯಸನಿ ಮಗನನ್ನು ಕೊಂದ 64 ವರ್ಷದ ತಂದೆಯ ಬಂಧನ:
ಬೆಂಗಳೂರು: ಮದ್ಯ ಸೇವಿಸಿ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆಗೈದಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ರಾಜೇಶ್ (36) ಕೊಲೆಯಾದವರು. ಲಿಂಗಪ್ಪ ಹತ್ಯೆಗೈದ ಆರೋಪಿ.
ಕ್ಯಾಬ್ ಚಾಲಕನಾಗಿದ್ದ ರಾಜೇಶ್, ನಿತ್ಯವೂ ಪಾನಮತ್ತನಾಗಿ ಬಂದು ಪೋಷಕರೊಂದಿಗೆ ಜಗಳವಾಡುತ್ತಿದ್ದ. ತಡರಾತ್ರಿ ಪಾನಮತ್ತನಾಗಿ ಬಂದಿದ್ದ ರಾಜೇಶ್, ಮನೆಯ ಗೇಟ್ನ್ನ ಒದ್ದು, ತಂದೆಯ ಮೇಲೆ ಹಲ್ಲೆ ಮಾಡಲಾರಂಭಿಸಿದ್ದ. ಬೇಸತ್ತ ಲಿಂಗಪ್ಪ, ಪಾನಮತ್ತನಾಗಿದ್ದ ರಾಜೇಶ್’ನ ಕೈಕಾಲು ಕಟ್ಟಿ ಮರದ ದೊಣ್ಣೆಯಿಂದ ಹೊಡೆದಿದ್ದಾರೆ. ಇದರಿಂದಾಗಿ ರಾಜೇಶ್ ಮೃತಪಟ್ಟಿದ್ದಾನೆ. ಪತಿ ಮತ್ತು ಮಗ ಜಗಳವಾಡುತ್ತಿರುವುದನ್ನು ಕಂಡ ಲಿಂಗಪ್ಪ ಅವರ ಪತ್ನಿ ಪುಟ್ಟಮ್ಮ ತಮ್ಮ ಸೋದರಳಿಯ ಲೋಕೇಶ್ ಅವರನ್ನು ಸಹಾಯಕ್ಕೆ ಕರೆದಿದ್ದಾರೆ. ಲೋಕೇಶ್ ಮನೆಗೆ ಬಂದಾಗ ರಾಜೇಶ್ ತಲೆಯಿಂದ ತೀವ್ರ ರಕ್ತಸ್ರಾವವಾಗಿ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ನಂತರ ಲೋಕೇಶ್ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಶನಿವಾರ ಮಧ್ಯರಾತ್ರಿ 1.40ರ ಸುಮಾರಿಗೆ ಘಟನೆ ನಡೆದಿತ್ತು.
ಕುಡಿತದ ಚಟದಿಂದಾಗಿ ರಾಜೇಶನ ಪತ್ನಿ ಮಗುವಿನೊಂದಿಗೆ ಪೋಷಕರ ಮನೆಗೆ ಮರಳಿದ್ದರು. ಪತ್ನಿ ಬಿಟ್ಟು ಹೋದ ನಂತರ ರಾಜೇಶ್ ತನ್ನ ತಂದೆ ತಾಯಿಯ ಬಳಿಯೇ ಇದ್ದ. ಲಿಂಗಪ್ಪ, ಮಗನನ್ನು ಕತ್ತು ಹಿಸುಕಿ ಸಾಯಿಸುವ ಮೊದಲು, ಅದೇ ಹಗ್ಗದಿಂದ ಅವನ ಕೈಗಳನ್ನು ಕಟ್ಟಿದ್ದ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್ ಆರ್ ನಗರದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕೆಂಗೇರಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.