ಮಂಡ್ಯ ಕ್ಷೇತ್ರದ ಟಿಕೆಟ್ ಜೆಡಿಎಸ್ ಗೆ ಫಿಕ್ಸ್? ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ ಸುಮಲತಾ.!
ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲವು ಸಾಧಿಸಿದ್ದಾರೆ. ಇದಾದ ನಂತರ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ (BJP) ಬೆಂಬಲ ನೀಡಿದರು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ (JDS) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಎನ್ಡಿಎ ಒಕ್ಕೂಟದಲ್ಲಿ ಸೇರ್ಪಡೆಯಾಗಿದೆ. ಇದು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಮುಳುವಾಗಿ ಪರಿಣಮಿಸಿದೆ. ಈ ಬಾರಿಯೂ ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತೇನೆಂದು ಪಟ್ಟು ಹಿಡಿದಿರುವ ಸುಮಲತಾ ಅಂಬರೀಶ್ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೌದು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ. ಇದರಿಂದ ಸಂಸದೆ ಸುಲಮತಾ ಅಂಬರೀಶ್ ಮುಂದಿನ ನಡೆ ಏನು? ಇಲ್ಲಿದೆ ಓದಿ..
ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಸರ್ವೆಗಳೂ ಸಹ ಬಿಜೆಪಿ-ಜೆಡಿಎಸ್ ಕರ್ನಾಟಕದಲ್ಲಿ 23 ಸ್ಥಾನ ಗೆಲ್ಲುತ್ತೆಂಬ ಭವಿಷ್ಯ ನುಡಿತಿವೆ. ಹೀಗಾಗಿ ಹುಮ್ಮಸ್ಸಿನಲ್ಲಿರೋ ದೋಸ್ತಿಗಳು ಸೀಟು ಹಂಚಿಕೆ ಫೈನಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶನಿವಾರ (ಮಾ.16) ರಂದು ದೆಹಲಿಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಅಮಿತ್ ಶಾ ಭೇಟಿ ಮಾಡಿದ್ದು, ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳು ಬಹುತೇಕ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ.
ಮೂರು ಕ್ಷೇತ್ರಗಳ ಅಭ್ಯರ್ಥಿಯನ್ನ ನೀವೇ ಘೋಷಣೆ ಮಾಡಿ ಅಂತಾ ಅಮಿತ್ ಶಾ ಸಲಹೆ ನೀಡಿದ್ದಾರಂತೆ. ಹೀಗಾಗಿ ಇನ್ನು 2-3 ದಿನಗಳಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಿಸುವ ಸಾಧ್ಯತೆ ಇದೆ. ಹಾಸನದಿಂದ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಸಿ.ಎಸ್ ಪುಟ್ಟರಾಜು, ಕೋಲಾರದಿಂದ ಸಮೃದ್ಧಿ ಮಂಜುನಾಥ್ ಅಥವಾ ಮಲ್ಲೇಶ್‌ಬಾಬು ಕಣಕ್ಕಿಳಿಯುವ ಸಾಧ್ಯತೆ ಇದೆ.
ಇದು ಸಂಸದೆ ಸುಮಲತಾ ಅಂಬರೀಶ್ಗೆ ತಲೆ ನೋವಾಗಿ ಪರಿಣಮಿಸಿದೆ. ಹೌದು ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಟಿಕೆಟ್ ನನಗೆ ಸಿಗುತ್ತದೆ ಎಂದು ಗೌಡತಿ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೆ ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದು ಪಟ್ಟು ಹಿಡಿದ್ದರು. ಆದರೆ ಇದೀಗ ಟಿಕೆಟ್ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ. ಹಾಗಿದ್ದರೆ ಮಂಡ್ಯ ಹಾಲಿ ಸಂಸದೆ ಸುಮಲತಾ ಮುಂದಿನ ದಾರಿ ಯಾವುದು..?
ಮಂಡ್ಯ ಟಿಕೆಟ್ ಜೆಡಿಎಸ್ಗೆ ಫಿಕ್ಸ್ ಆಗುತ್ತಿದ್ದಂತೆಯೇ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬುಲಾವ್ ನೀಡಿದ್ದಾರೆ. ವರಿಷ್ಠರ ಕರೆ ಮೇರೆಗೆ ಸುಮಲತಾ ಅಂಬರೀಶ್ ದೆಹಲಿಗೆ ದೌಡಾಯಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಜೆ.ಪಿ ನಡ್ಡಾ ಮನವೊಲಿಸುವ ಸಾಧ್ಯತೆ ಇದೆ. ಅಥವಾ ಬೇರೊಂದು ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆ ಇದೆ.
ಸುಮಲತಾಗೆ ಮಂಡ್ಯ ಬಿಟ್ಟು ಬೇರೆ ಕ್ಷೇತ್ರದ ಟಿಕೆಟ್?
ಸಂಸದೆ ಸುಮಲತಾ ಅಂಬರೀಶ್ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಹೈಕಮಾಂಡ್ ಒಲವು ಹೊಂದಿದ್ದಾರೆ. ಆದರೆ ಸುಮಲತಾ ಅಂಬರೀಶ್ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪುತಾರಾ ಎಂಬುವುದನ್ನು ಕಾದು ನೋಡಬೇಕಿದೆ. ಇನ್ನು ಸುಮಲತಾ ಅಂಬರೀಶ್ ಮಂಡ್ಯ ಬಿಟ್ಟು ಬೇರೆ ಎಲ್ಲಿಯೂ ಸ್ಪರ್ಧೆ ಮಾಡಲ್ಲ ಎಂದಿದ್ದಾರೆ. ಇಂದಿನ ಸಭೆಯ ಬಳಿಕ ಸುಮಲತಾ ಸ್ಪರ್ಧೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.