ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಕಾರು ಡಿಕ್ಕಿ ; ಬೈಕ್ ಸವಾರ ಸಾವು!
ಚಿತ್ರದುರ್ಗ, ಸೆ.7: ಕಂದಾಯ ಇಲಾಖೆ (Revenue Department) ಮುಖ್ಯ ಕಾರ್ಯದರ್ಶಿ ಕಾರು ಡಿಕ್ಕಿಯಾಗಿ (Accident) ಬೈಕ್ ಸವಾರ ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಕ್ರಾಸ್ ಬಳಿ ನಿನ್ನೆ (ಸೆಪ್ಟೆಂಬರ್ 6) ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ಕುನಗಲಿ ಗ್ರಾಮದ ಬಸವರಾಜಪ್ಪ (68) ಮೃತ ಬೈಕ್ ಸವಾರ.
ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಕಂದಾಯ ಸಚಿವರ ಜೊತೆ ತೆರಳಿದ್ದು, ಇವರ ಹಿಂದೆ ಕಟಾರಿಯಾ ಅವರ ಕಾರು ಕೂಡ ಬರುತ್ತಿತ್ತು. ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಕ್ರಾಸ್ ಬಳಿ ಬರುತ್ತಿದ್ದಂತೆ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಬೈಕ್ ಸವಾರ ಬಸವರಾಜಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತಾದರೂ ಮಾರ್ಗಮದ್ಯೆ ಕೊನೆಯುಸಿರೆಳೆದಿದ್ದಾರೆ. ಅಪಘಾತ ಸಂಬಂಧ ಕಾರು ಚಾಲಕ ಧನುಷ್ ವಿರುದ್ಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಪರ್ಧಾಳು ಪಕ್ಕದಲ್ಲಿ ನಿಂತಿದ್ದವನ ಕಾಲಿನ ಮೇಲೆ ಜಾರಿಬಿತ್ತು 175 ಕೆಜಿ ತೂಕದ ಗುಂಡುಕಲ್ಲು! ಮುರಿದ ಕಾಲು ಮೂಳೆ
ವಿಜಯಪುರ, ಸೆಪ್ಟೆಂಬರ್ 7: ಗುಂಡು ಕಲ್ಲು ಎತ್ತುವ ಸ್ಪರ್ಧೆ (Rock Lifting) ವೇಳೆ ಅವಘಡ ಸಂಭವಿಸಿದೆ. ಗುಂಡು ಕಲ್ಲು ಎತ್ತುವ ಸ್ಪರ್ಧಾಳು (Competitor) ಜೊತೆಗಿದ್ದವನ ಕಾಲಿನ ಮೇಲೆ 175 ಕೆಜಿ ತೂಕದ ಗುಂಡು ಕಲ್ಲು ಜಾರಿ ಬಿದ್ದಿದೆ. ವಿಜಯಪುರ ಜಿಲ್ಲೆ (Vijayapura) ಬಸವನಬಾಗೇವಾಡಿ ಪಟ್ಟಣದಲ್ಲಿ ನಿನ್ನೆ ಬುಧವಾರ ಘಟನೆ ಬೆಳಕಿಗೆ ಬಂದಿದೆ. ಮೂಲ ನಂದೀಶ್ವರ ದೇವಸ್ಥಾನ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುಂಡು ಕಲ್ಲು ಹಾಗೂ ಸಾಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಶಿವನಗೌಡ ಪಾಟೀಲ್ ಕಾಲಿನ ಮೇಲೆ ಗುಂಡು ಕಲ್ಲು ಬಿದ್ದಿದೆ.
ಪೈಲ್ವಾನ್ ಚಂದ್ರಶೇಖರ್ ಯಾಳವಾರ್ 175 ಕೆ.ಜಿ ಗುಂಡು ಕಲ್ಲು ಎತ್ತುತ್ತಿದ್ದರು. ಗುಂಡು ಕಲ್ಲು ಕೆಳಗಿಳಿಸೋ ವೇಳೆ ಅವಘಡ ನಡೆದಿದೆ. ಶಿವನಗೌಡ ಕಾಲು ಮೂಳೆ ಮುರಿದಿದ್ದು (Bone Fracture), ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಸ್ಥಳೀಯರು ಮೂಳೆ ಮುರಿದುಕೊಂಡು ಒದ್ದಲಾಡುತ್ತಿದ್ದ ಶಿವನಗೌಡ ನೆರವಿಗೆ ಧಾವಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ.