CSK ನಾಯಕತ್ವ ಸ್ಥಾನದಿಂದ ಕೆಳಗಿಳಿದ ಮಹೇಂದ್ರ ಸಿಂಗ್ ದೋನಿ ; ಹೊಸ ನಾಯಕ ಯಾರು?
17ನೇ ಆವೃತ್ತಿಯ ಐಪಿಎಲ್ (IPL 2024) ಆರಂಭಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಲೀಗ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (CSK vs RCB) ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ (MS Dhoni) ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ಗೆ (Ruturaj Gaikwad) ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.
ವಾಸ್ತವವಾಗಿ ಕಳೆದ ಆವೃತ್ತಿಯಲ್ಲೇ ಮಂಡಿ ನೋವಿನೊಂದಿಗೆ ಇಡೀ ಲೀಗ್ ಆಡಿದ್ದ ಧೋನಿ ತಂಡವನ್ನು ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಮಾಡಿದ್ದರು. ಆ ವೇಳೆಯೆ ಧೋನಿ ಐಪಿಎಲ್ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲಾ ಊಹಪೋಹಗಳನ್ನು ಸುಳ್ಳು ಮಾಡಿದ್ದ ಧೋನಿ, ಮತ್ತೆ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದರು. ಆದರೆ ಲೀಗ್ ಆರಂಭಕ್ಕೂ ಮುನ್ನ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುವೆ ಎಂದಿದ್ದ ಧೋನಿ, ಇದೀಗ ನಾಯಕತ್ವವನ್ನು ತ್ಯಜಿಸಿ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಿಲಿದ್ದಾರೆ.
ರುತುರಾಜ್ ನೂತನ ನಾಯಕ
ವಾಸ್ತವವಾಗಿ ಪ್ರತಿ ಸೀಸನ್‌ನಂತೆ, ಐಪಿಎಲ್ ಪ್ರಾರಂಭವಾಗುವ ಮೊದಲು, ಎಲ್ಲಾ ತಂಡಗಳ ನಾಯಕರು ಟ್ರೋಫಿಯೊಂದಿಗೆ ಫೋಟೋಶೂಟ್ ಮಾಡುತ್ತಾರೆ. ಈ ಸೀಸನ್ನಲ್ಲಿಯೂ ಫೋಟೋ ಶೂಟ್ ಏರ್ಪಡಿಸಲಾಗಿತ್ತು. ಈ ವೇಳೆ ಎಲ್ಲಾ 10 ತಂಡಗಳ ನಾಯಕರು ಫೋಟೋಶೂಟ್‌ಗೆ ಬಂದಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಎಂಎಸ್ ಧೋನಿ ಬದಲಿಗೆ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದರು. ಈ ಮೂಲಕ ಈ ಆವೃತ್ತಿಯಿಂದ ಗಾಯಕ್ವಾಡ್ ತಂಡದ ನಾಯಕರಾಗಲಿದ್ದಾರೆ ಎಂಬುದು ಖಚಿತವಾಗಿದೆ. ಅಲ್ಲದೆ ಈ ವಿಚಾರವನ್ನು ಸಿಎಸ್ಕೆ ಫ್ರಾಂಚೈಸಿ ಕೂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮಾಹಿತಿ ನೀಡಿದೆ.
ಧೋನಿ ನಾಯಕತ್ವದಲ್ಲಿ ಐದು ಬಾರಿ ಚಾಂಪಿಯನ್
ಧೋನಿ ತಮ್ಮ ನಾಯಕತ್ವದಲ್ಲಿ ಸಿಎಸ್ಕೆ ತಂಡವನ್ನು ಐದು ಬಾರಿ ಐಪಿಎಲ್ ಗೆಲ್ಲುವಂತೆ ಮಾಡಿದ್ದಲ್ಲದೆ, ತಂಡವನ್ನು ಐದು ಬಾರಿ ಫೈನಲ್‌ಗೆ ಕೊಂಡೊಯ್ದಿದ್ದರು. ಈ ಮೂಲಕ 10 ಐಪಿಎಲ್ ಫೈನಲ್‌ಗಳನ್ನು ಆಡಿದ ಏಕೈಕ ನಾಯಕ ಎಂಬ ದಾಖಲೆಯನ್ನೂ ಧೋನಿ ಬರೆದಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ 2010, 2011, 2018, 2021 ಮತ್ತು 2023ರಲ್ಲಿ ಚಾಂಪಿಯನ್ ಆಗಿದಲ್ಲದೆ, 2008, 2012, 2013, 2015 ಮತ್ತು 2019 ರಲ್ಲಿ ರನ್ನರ್ಅಪ್ ಆಗಿತ್ತು.
ರುತುರಾಜ್ ಪ್ರದರ್ಶನ ಹೇಗಿದೆ?
ರುತುರಾಜ್ ಗಾಯಕ್ವಾಡ್ ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 3 ಸೀಸನ್‌ಗಳನ್ನು ಆಡಿದ್ದಾರೆ. 2020 ರಲ್ಲಿ ಸಿಎಸ್ಕೆ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದ ರುತುರಾಜ್ ಚೊಚ್ಚಲ ಆವೃತ್ತಿಯಲ್ಲಿ ಕೇವಲ 6 ಪಂದ್ಯಗಳನ್ನು ಆಡಿದ್ದರು. ಆದರೆ 2021 ರ ಐಪಿಎಲ್‌ನಲ್ಲಿ ತಂಡದ ಖಾಯಂ ಆಟಗಾರನಾಗಿ ಕಾಣಸಿಕೊಂಡಿದ್ದ ರುತುರಾಜ್, ಒಂದು ಶತಕ ಮತ್ತು 4 ಅರ್ಧ ಶತಕಗಳ ಆಧಾರದ ಮೇಲೆ 635 ರನ್ ಬಾರಿಸಿದ್ದರು. ಆದರೆ 2022 ರ ಐಪಿಎಲ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್ ಕೇವಲ 368 ರನ್ ಕಲೆಹಾಕಿದ್ದರು. ಅದಾಗ್ಯೂ ಕಳೆದ ಸೀಸನ್ನಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದ ಗಾಯಕ್ವಾಡ್ ಆಡಿದ 16 ಪಂದ್ಯಗಳಲ್ಲಿ 590 ರನ್ ಗಳಿಸುವ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗಾಯಕ್ವಾಡ್ ಐಪಿಎಲ್‌ನಲ್ಲಿ ಇದುವರೆಗೆ 52 ಪಂದ್ಯಗಳನ್ನು ಆಡಿದ್ದು, 39 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 1797 ರನ್ ಗಳಿಸಿದ್ದಾರೆ.
OFFICIAL STATEMENT: MS Dhoni hands over captaincy to Ruturaj Gaikwad. #WhistlePodu #Yellove
— Chennai Super Kings (@ChennaiIPL) March 21, 2024
A new chapter begins at the Yellove Kingdom! 🦁🌟#WhistlePodu #Yellove 🦁💛 pic.twitter.com/a7I42aeRzE
— Chennai Super Kings (@ChennaiIPL) March 21, 2024