ಮಹಾರಾಷ್ಟ್ರದ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸಂಸದ ಬಾಲು ಧನೋರ್ಕರ್ ನಿಧನ
ಮುಂಬಯಿ: ಮಹಾರಾಷ್ಟ್ರದ ಕಾಂಗ್ರೆಸ್‌ನ (CONGRESS) ಏಕೈಕ ಲೋಕಸಭಾ (Lok Sabha) ಸದಸ್ಯ ಬಾಲು ಧನೋರ್ಕರ್ (Balu Dhanorkar) (48) ಅವರು ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ಹೊಸದಿಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಳೆದ ವಾರವಷ್ಟೇ ಬಾಲು ಅವರ ತಂದೆ ನಾರಾಯಣ್ ಧನೋರ್ಕರ್ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಕಳೆದ ವಾರ ಧನೋರ್ಕರ್ ಅವರನ್ನು ಮೂತ್ರಪಿಂಡದ (kidney stone) ಕಲ್ಲುಗಳ ಚಿಕಿತ್ಸೆಗಾಗಿ ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಹೊಸದಿಲ್ಲಿಗೆ ಸ್ಥಳಾಂತರಿಸಲಾಯಿತು ಎಂದು ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ತಿಳಿಸಿದ್ದಾರೆ.
ಧನೋರ್ಕರ್ ಅವರು ಚಂದ್ರಾಪುರ ಜಿಲ್ಲೆಯಲ್ಲಿ ಬಾಳಾಸಾಹೇಬ್ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದು, 2014ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದರು. ಅವರು ಬಿಜೆಪಿಯ ಹಂಸರಾಜ್ ಅಹಿರ್ ಸ್ಪರ್ಧಿಸಿದ್ದ ಚಂದ್ರಾಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದರು. ಧನೋರ್ಕರ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಅಹಿರ್ ಅವರನ್ನು ಸೋಲಿಸಿದರು. ಅವರ ಪತ್ನಿ 2019ರಲ್ಲಿ ವರೋರಾ-ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.
ಅವರು ಪತ್ನಿ ಶಾಸಕಿ ಪ್ರತಿಭಾ ಧನೋರ್ಕರ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸಂತಾಪ
ಬಾಲು ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.