- ಬೆಂಗಳೂರು
- 2:34 ಅಪರಾಹ್ನ
- ನವೆಂಬರ್ 21, 2023
ಬ್ಲ್ಯಾಕ್ಮೈಲ್ ಮಾಡಿ ಮಗಳನ್ನು ಮದುವೆಗೆ ಪೀಡಿಸುತ್ತಿದ್ದ ಪ್ರಿಯಕರ; ರಾಡ್ ನಿಂದ ಹೊಡೆದು ಕೊಂದ ಯುವತಿ ತಂದೆ..!

ಬೆಂಗಳೂರು: ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಕರೆಸಿ ರಾಡ್‌ನಿಂದ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಹತ್ಯೆ (Murder Case) ಮಾಡಲಾಗಿದೆ. ಬೆಂಗಳೂರಿನ ಅಶೋಕನಗರ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್ ಬಳಿ ಘಟನೆ ನಡೆದಿದೆ. ಡೇವಿಡ್ (22) ಕೊಲೆಯಾದವನು. ಯುವತಿ ತಂದೆ ಮಂಜುನಾಥ್ ಎಂಬಾತನಿಂದ ಕೃತ್ಯ ನಡೆದಿದೆ.
ವಿಲ್ಸನ್ ಗಾರ್ಡನ್ ವಿನಾಯಕ ನಗರದಲ್ಲಿ ಮಂಜುನಾಥ್ ಕುಟುಂಬ ವಾಸವಾಗಿತ್ತು. ಆಟೋ ಡ್ರೈವರ್ ಆಗಿದ್ದ ಡೇವಿಡ್ ಹಾಗೂ ಮಂಜುನಾಥ್ ಅವರ ಮಗಳು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಮದುವೆ ಮಾಡಿ ಕೊಡುವಂತೆ ಪದೇಪದೆ ಪೀಡಿಸುತ್ತಿದ್ದ. ಮದುವೆಗೆ ನಿರಾಕರಿಸಿದರೆ ಮಗಳೊಂದಿಗೆ ಇರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.
ನಿಮ್ಮ ಮಗಳ ಫೋಟೊ, ವಿಡಿಯೊ ನನ್ನ ಬಳಿ ಇದೆ ಎಂದು ಡೇವಿಡ್ ಹೆದರಿಸುತ್ತಿದ್ದ. ಇದರಿಂದ ಮಗಳ ಮರ್ಯಾದೆ ಎಲ್ಲಿ ಹಾಳಾಗಿ ಬಿಡುತ್ತೆ ಎಂದು ಆತಂಕಗೊಂಡ ಮಂಜುನಾಥ್ ಅವರು ಡೇವಿಡ್‌ನನ್ನು ಕೊಂದು ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.
ಮಾತನಾಡುವ ನೆಪದಲ್ಲಿ ಡೇವಿಡ್‌ನನ್ನು ಕರೆಸಿಕೊಂಡ ಮಂಜುನಾಥ್ ರಾಡ್‌ನಿಂದ ಹೊಡೆದಿದ್ದಾರೆ. ಬಳಿಕ ಡೇವಿಡ್ ಕೆಳಗೆ ಬೀಳುತ್ತಿದ್ದಂತೆ ಚಾಕುವಿನಿಂದ ಇರಿದು ನಂತರ ಹಾಲೋಬ್ರಿಕ್ಸ್ ಕಲ್ಲನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಸದ್ಯ ಆರೋಪಿ ಮಂಜುನಾಥ್‌ನನ್ನು ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡೇವಿಡ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಅತ್ತೆ ಮನೆಗೆ ಕನ್ನ ಹಾಕಿದ ಅಳಿಯ! ಉಂಡು ಹೋದ ಕೊಂಡು ಹೋದ
ಬೆಂಗಳೂರು: ಅತ್ತೆ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಒಳಗೆ ನುಗ್ಗಿದ ಖದೀಮ ಅಳಿಯ ಚಿನ್ನಾಭರಣವನ್ನೆಲ್ಲ ಲೂಟಿ ಮಾಡಿ ಪರಾರಿ (Theft Case) ಆಗಿದ್ದ. ಇದೀಗ ಚಲಾಕಿ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಕುಮಾರ್ ಬಂಧಿತ ಆರೋಪಿ.
ರೆಜಿನಾ ಎಂಬುವವರ ಮನೆಯಲ್ಲಿ ಪ್ರದೀಪ್ ಕುಮಾರ್ ಕಳ್ಳತನ ಮಾಡಿ ಜೈಲು ಕಂಬಿ ಎಣಿಸುವಂತಾಗಿದೆ. ಈ ಪ್ರದೀಪ್ ಕುಮಾರ್ ರೆಜಿನಾ ಅವರ ಚಿಕ್ಕ ಮಗಳು ಲಾವಣ್ಯಾಳನ್ನು ಒಂದೂವರೆ ವರ್ಷ ಪ್ರೀತಿಸಿ ಬಳಿಕ ಆಕೆಯನ್ನು ಮರುಳು ಮಾಡಿ ಕರೆದುಕೊಂಡು ಹೋಗಿದ್ದ. ದೂರು ದಾಖಲಾಗುತ್ತಿದ್ದಂತೆ ಮಾವನ ಮನೆಯನ್ನು ಸೇರಿದ್ದ.
ಒಂದೂವರೆ ವರ್ಷದ ಬಳಿಕ ಅತ್ತೆ ಮನೆಗೆ ಕನ್ನ ಹಾಕಿ ಚಿನ್ನಾಭರಣ ಹೊತ್ತೊಯ್ದಿದ್ದಾನೆ. ಅತ್ತೆ ರೆಜಿನಾ ಕನ್ಯಾಕುಮಾರಿಗೆ ಹೋದ ಸಂದರ್ಭದಲ್ಲಿ ಕಳ್ಳತನ ಮಾಡಿದ್ದ. ಕಳ್ಳತನ ಮಾಡಿ ಚಿನ್ನಾಭರಣ ತೆಗೆದುಕೊಂಡು ಪರಾರಿ ಆಗುತ್ತಿದ್ದಾಗ ಅಕ್ಕ ಪಕ್ಕದ ನಿವಾಸಿಗಳು ನೋಡಿದ್ದರು.
ಕೂಡಲೇ ಸ್ಥಳೀಯರು ಪ್ರಶ್ನೆ ಮಾಡಿದಾಗ ನಾನು ಇವರ ಸಂಬಂಧಿ ಎಂದು ಹೇಳಿ ಕಾಲ್ಕಿತ್ತಿದ್ದ. ಈ ವೇಳೆ ಸ್ಥಳೀಯರು ಆತನ ಫೋಟೊ ತೆಗೆದು ರೆಜಿನಾ ಅವರಿಗೆ ಕರೆ ಮಾಡಿದ್ದರು. ಆದರೆ ರೆಜಿನಾ ಅವರ ಫೋನ್ ಕಾಲ್ ಸಂಪರ್ಕ ಸಾಧ್ಯವಾಗಿರಲಿಲ್ಲ. ನಂತರ ಕನ್ಯಾಕುಮಾರಿಯಿಂದ ವಾಪಾಸ್ ಬಂದಾಗ ರೆಜಿನಾ ಅವರಿಗೆ ಶಾಕ್ ಆಗಿತ್ತ. ಯಾಕೆಂದರೆ ಬೀಗ ಹಾಕಿದ್ದ ಮನೆ ಬಾಗಿಲು ಒಡೆದಿತ್ತು. ಅನುಮಾನಗೊಂಡು ನೋಡಿದಾಗ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿ ಒಟ್ಟು 40 ಲಕ್ಷ ರೂ. ಕಳ್ಳತನವಾಗಿತ್ತು.
ಕಳ್ಳತನವಾಗಿರುವುದು ಗೊತ್ತಾದ ಕೂಡಲೇ ಅಕ್ಕಪಕ್ಕದ ನಿವಾಸಿಗಳು ತಾವು ನೋಡಿರುವುದಾಗಿ ಹೇಳಿ, ಫೋಟೊ ತೋರಿಸಿದ್ದಾರೆ. ಕಳ್ಳತನ ಮಾಡಿದ್ದ ಸ್ವಂತ ಅಳಿಯನೇ ಎಂದು ತಿಳಿದ ಕೂಡಲೇ ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಅತ್ತೆ ರೆಜಿನಾ ದೂರು ದಾಖಲಿಸಿದ್ದಾರೆ.
ಇನ್ನು ಮಗಳು ಎಲ್ಲಿದ್ದಾಳೆಂದು ಎಂಬುದು ರೆಜಿನಾ ಅವರಿಗೆ ತಿಳಿದಿಲ್ಲವಂತೆ. ಸದ್ಯ ಈ ಸಂಬಂಧ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ. ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.