ಲವ್ ಬ್ರೆಕ್-ಅಪ್ ನಿಂದ ಪ್ರಿಯತಮೆಯನ್ನು 20 ಬಾರಿ ಚಾಕುವಿನಿಂದ ಇರಿದು ಕೊಲೆ!

ನವದೆಹಲಿ: ವಾಯುವ್ಯ ದೆಹಲಿಯ ಶಹಬಾದ್ ಡೈರಿನಲ್ಲಿ ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆ ವೇಳೆ, ಲವ್ ಬ್ರೇಕ್ ಅಪ್ ನಿಂದ ಕುಪಿತನಾದ ಆರೋಪಿ 20 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸಾಹಿಲ್ ನನ್ನು ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಸೋಮವಾರ ಬಂಧಿಸಲಾಗಿದೆ.
ಅಪ್ರಾಪ್ತೆ ಸಾಕ್ಷಿ ತನ್ನ ಮಾಜಿ ಪ್ರಿಯಕರನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಆರೋಪಿ ಕೆಲವು ದಿನಗಳ ಹಿಂದೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆಯೂ ಇದೇ ವಿಚಾರವನ್ನು ತಿಳಿಸಿದ ಆರೋಪಿ, ಭಾನುವಾರ ಸಂಜೆ 20 ಬಾರಿ ಚಾಕುವಿನಿಂದ ಇರಿದಿದ್ದು, ಆಕೆ ಮೇಲೆ ಸಿಮೆಂಟ್ ಚಪ್ಪಡಿ ಎತ್ತಿಹಾಕಿ ಕೊಂದಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮೃತಪಟ್ಟ ಬಾಲಕಿಯ ದೇಹದಲ್ಲಿ 34 ಗಾಯದ ಗುರುತುಗಳು ಕಂಡುಬಂದಿವೆ ಮತ್ತು ಆಕೆಯ ತಲೆಬುರುಡೆ ಛಿದ್ರಗೊಂಡಿದೆ. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ವೇಳೆ ಪೊಲೀಸರು ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆಕೆಯ ಕುಟುಂಬದವರನ್ನು ವಿಚಾರಿಸಿದಾಗ ಸಾಹಿಲ್ ಜೊತೆಗೆ ಹೋಗಿರುವುದು ತಿಳಿದುಬಂದಿದೆ. ನಂತರ ಆ ಸ್ಥಳಕ್ಕೆ ಹೋದಾಗ ಹುಡುಗ ತಲೆಮರೆಸಿಕೊಂಡಿದ್ದ. “ಸಾಹಿಲ್‌ನ ಹಠಾತ್ ಆಗಮನದ ಬಗ್ಗೆ ಅವನ ಚಿಕ್ಕಮ್ಮ ಅವನ ತಂದೆಗೆ ಫೋನ್ ಮಾಡಿದಾಗ ಆತ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವುದು ಪೊಲೀಸರಿಗೆ ಗೊತ್ತಾಗಿದೆ. ನಂತರ ಆತನನ್ನು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಆತನ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 2 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.