- ಬಂಟ್ವಾಳ
- 8:54 ಅಪರಾಹ್ನ
- ಮಾರ್ಚ್ 13, 2023
ತಾಯಿ ಸಂಸ್ಕಾರದಲ್ಲಿ ಮಗುವಿನ ಭವಿಷ್ಯ – ಮಾಣಿಲ ಶ್ರೀ

ವಿಟ್ಲ: ತಾಯಂದಿರ ಸಂಸ್ಕಾರದಲ್ಲಿ ಮಗುವಿನ ಭವಿಷ್ಯ ಹುದುಗಿದೆ. ಮಗುವು ಗರ್ಭದಲ್ಲಿರುವಾಗಲೇ ತಾಯಿ ಸತ್ಕರ್ಮ, ಸತ್‌ಚಿಂತನೆಯಲ್ಲಿ ಇರಬೇಕು. ನಮ್ಮ ಕ್ಷಾತ್ರತೇಜಸ್ಸು ಪ್ರಭಾವ ಪ್ರಕಾಶಮಾನವಾಗಬೇಕಾದರೆ ಭಾವನೆ, ಚಿಂತನೆ, ಧರ್ಮ ಒಂದಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದರು.ಅವರು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ರವೀಶ ತಂತ್ರಿಗಳು ಕುಂಟಾರು ರವರು ಮಾತನಾಡಿ ದೇವರು ಮತ್ತು ಮನುಷ್ಯ ಮಧ್ಯೆ ಇರುವ ಸಂಬಂಧ ಬಿಂಬ ಮತ್ತು ಪ್ರತಿಬಿಂಬದಂತೆ. ದೇವ ಸಾನ್ನಿಧ್ಯ ಅಥವಾ ದೇವರ ಮೂರ್ತಿ ಚೈತನ್ಯದಲ್ಲಿದ್ದಾಗ ನಮಗೆಲ್ಲಾ ಅದರ ಪ್ರತಿಫಲ ಸಿಗುವುದಕ್ಕಾಗಿ ಕಲಿಯುಗದಲ್ಲಿ ಮೂರ್ತಿ ಆರಾಧನೆ ನಡೆಸಲಾಗುತ್ತಿದೆ. ಗೆದ್ದು ಜೀವಿಸಬೇಕೆಂಬ ಜೀವನಕ್ಕೆ ಧನಾತ್ಮಕ ಪ್ರೇರಣೆ ದೇವಾಲಯಗಳಿಂದ ದೊರೆಯುತ್ತದೆ ಎಂದು ತಿಳಿಸಿದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾರವರು ಮಾತನಾಡಿ ವಿಶ್ವದಲ್ಲಿ ಪುಣಚ ಶಕ್ತಿಯಾಗಿದೆ. ನರೇಂದ್ರ ಮೋದಿಯವರು ಹಿಂದು ಧರ್ಮದ ಶ್ರದ್ಧಾಕೇಂದ್ರಗಳ ಪುನರುತ್ಥಾನ ಮಾಡುತ್ತಿರುವುದರಿಂದ ಜಗತ್ತು ಭಾರತದತ್ತ ನೋಡುತ್ತಿದೆ ಎಂದರು. ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರಿನ ವೈದ್ಯ ಡಾ. ಎಂ.ಕೆ. ಪ್ರಸಾದ್, ಮುಂಬಯಿಯ ಹೇರಂಬ ಇಂಡಸ್ಟ್ರೀಸ್ ನ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು, ಮುಂಬೈ ಟೆಕ್ನೊ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ವಿವೇಕ್ ಶೆಟ್ಟಿ ನಗ್ರಿಗುತ್ತು ಭಾಗವಹಿಸಿದ್ದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು, ಆಡಳಿತ ಸಮಿತಿಯ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಉದಯ ಕುಮಾರ್ ದಂಬೆ ಉಪಸ್ಥಿತರಿದ್ದರು.
ಅನುಷಾ ದಂಬೆ ಪ್ರಾರ್ಥಿಸಿದರು. ಆಡಳಿತ ಮಂಡಳಿ ಸದಸ್ಯ ಜಯಶ್ಯಾಂ ನೀರ್ಕಜೆ ಸ್ವಾಗತಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ ವಂದಿಸಿದರು. ರವೀಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.