- ಬೆಳ್ತಂಗಡಿ
- 2:21 ಅಪರಾಹ್ನ
- ಮಾರ್ಚ್ 16, 2023
ಉಜಿರೆಯಲ್ಲಿ ಬ್ಯಾಂಕ್ ಆಫ್ ಬರೋಡದ ನೂತನ ಮುಖ್ಯ ಶಾಖೆಯ ಉದ್ಘಾಟನೆ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಹೆಬ್ಬಾಗಿಲಿನಂತಿರುವ ಉಜಿರೆಯು ಸಸ್ಯಕಾಶಿಯಾಗಿಯೂ, ಜ್ಞಾನಕಾಶಿಯಾಗಿಯೂ ಬೆಳೆಯುತ್ತಿದ್ದು ಹಲವು ಸೃಜನಾತ್ಮಕ ಚಟುವಟಿಕೆಗಳ ಕೇಂದ್ರವಾಗಿದ್ದು ಸಾರ್ವಜನಿಕ ಸೇವೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.ಅವರು ಬುಧವಾರ ಉಜಿರೆಯಲ್ಲಿ ಚಾರ್ಮಾಡಿ ರಸ್ತೆಯಲ್ಲಿರುವ “ಮಂಜೂಷಾ” ಕಟ್ಟಡದಲ್ಲಿ ಬ್ಯಾಂಕ್ ಅಫ್ ಬರೋಡ ನೂತನ ಮುಖ್ಯ ಶಾಖೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
1966ರಲ್ಲಿ ತನ್ನ ತಂದೆ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಉಜಿರೆಯಲ್ಲಿ ಪದವಿ ಕಾಲೇಜನ್ನು ಪ್ರಾರಂಭಿಸಿದ ಬಳಿಕ ಸಸ್ಯಕಾಶಿಯಾಗಿದ್ದ ಉಜಿರೆಯು ಹಲವು ಪ್ರಗತಿಪರ ಚಟುವಟಿಕೆಗಳ ಮೂಲಕ ದೇಶದ ಗಮನ ಸೆಳೆದಿದೆ. ಗ್ರಾಮಾಭಿವೃದ್ಧಿ ಯೋಜನೆ, ಕೆ.ಜಿ. ಯಿಂದ ಪಿ.ಜಿ. ವರೆಗಿನ ಶಿಕ್ಷಣ ಸಂಸ್ಥೆಗಳು ಉನ್ನತ ಸಾಧನೆ ಮಾಡಿವೆ. 1968ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಬಳಿಕ ಅಂದಿನ ವಿಜಯಾಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿದ್ದ ಸುಂದರರಾಮ ಶೆಟ್ಟಿ ಅವರು ತನ್ನನ್ನು ಬ್ಯಾಂಕಿನ ನಿರ್ದೇಶಕರಾಗಿ ಮಾಡಿ ಸೇವೆ ನೀಡುವ ಅವಕಾಶ ನೀಡಿರುವುದನ್ನು ಹೆಗ್ಗಡೆಯವರು ಸ್ಮರಿಸಿದರು. ಉಜಿರೆಯ ನಾಗರಿಕರು ಬ್ಯಾಂಕ್ ಆಫ್ ಬರೋಡದ ಸೇವೆಯ ಸದುಪಯೋಗ ಪಡೆದು ಉನ್ನತ ಪ್ರಗತಿ ಸಾಧಿಸುವಂತಾಗಲೆಂದು ಹೆಗ್ಗಡೆಯವರು ಹಾರೈಸಿದರು.ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ. ಖುರಾನಾ ಮಾತನಾಡಿ, ಅಧಿಕ ಲಾಭ ಮತ್ತು ಉತ್ತಮ ಸೇವೆಯೊಂದಿಗೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕ್ ಆಫ್ ಬರೋಡ ಉನ್ನತ ಸಾಧನೆಯಲ್ಲಿ ದೇಶದಲ್ಲಿ ಎರಡನೆ ಸ್ಥಾನದಲ್ಲಿದೆ ಎಂದರು. ಹೆಗ್ಗಡೆಯವರು ಸಾಹಿತ್ಯ, ಧರ್ಮ, ಕಲೆ, ಸಮಾಜಸೇವೆ, ಗ್ರಾಮಾಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ
ಸಲ್ಲಿಸಿದ ಅನುಪಮ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.