ನಿತಿನ್ ಗಡ್ಕರಿಯಿಂದ ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟಿಸ್ ; ಏನಿದು ಆರೋಪ?
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂದರ್ಶನದ ಆಯ್ದ ಭಾಗವನ್ನು ತಿರುಚಿ ಪ್ರಸಾರ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಹಿರಿಯ ನಾಯಕ ಜೈರಾಮ್ ರಮೇಶ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಗೊಂದಲ ಉಂಟು ಮಾಡುವ ಮತ್ತು ತಮ್ಮ ಘನತೆಗೆ ಭಂಗ ತರುವ ಉದ್ದೇಶದಿಂದ ಈ ವಿಡಿಯೋ ಕ್ಲಿಪ್ ಹಂಚಿಕೊಳ್ಳಲಾಗಿದೆ ಎಂದು ಗಡ್ಕರಿ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಪಕ್ಷದೊಳಗೆ ಭಿನ್ನಾಭಿಪ್ರಾಯ ಮತ್ತು ವಿಭಜನೆಯನ್ನು ಬಿತ್ತುವ ಉದ್ದೇಶಪೂರ್ವಕ ಉದ್ದೇಶದಿಂದ ಸಂದರ್ಶನದ ಸಂದರ್ಭ ಮತ್ತು ಮಹತ್ವವನ್ನು ತಿರುಚಿದೆ ಎಂದು ಗಡ್ಕರಿ ಆರೋಪಿಸಿದ್ದಾರೆ.
“ಮಾರ್ಚ್ 1, 2024 ರಂದು 9:36 AM ಕ್ಕೆ ನಿಮ್ಮ ಪಕ್ಷದ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಅಧಿಕೃತ ಹ್ಯಾಂಡಲ್ ನಿಂದ ಮೈಕ್ರೋಬ್ಲಾಗಿಂಗ್ ಸೈಟ್ ‘X’ ನಲ್ಲಿ ವಿಷಯಗಳು ಮತ್ತು ಪೋಸ್ಟ್ ಗಳನ್ನು ನೋಡಿ ನನ್ನ ಕ್ಲೈಂಟ್ ಆಘಾತಕ್ಕೊಳಗಾಗಿದ್ದಾರೆ. ಕ್ಲೈಂಟ್ ನ ಸಂದರ್ಶನದ ಸಂದರ್ಭೋಚಿತ ಉದ್ದೇಶ ಮತ್ತು ಅರ್ಥವನ್ನು ಮರೆಮಾಚುವ ಮೂಲಕ 19 ಸೆಕೆಂಡುಗಳ ಆಡಿಯೊ ಮತ್ತು ದೃಶ್ಯ ಕ್ಲಿಪ್ಪಿಂಗ್ ನೀವು ಉದ್ದೇಶಪೂರ್ವಕವಾಗಿ ಪೋಸ್ಟ್ ಮಾಡಿರುವುದನ್ನು ಗಮನಿಸಲಾಗಿದೆ” ಎಂದು ಗಡ್ಕರಿ ಅವರ ವಕೀಲರು ಕಳುಹಿಸಿದ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ನೋಟಿಸ್ ತಲುಪಿದ 24 ಗಂಟೆಯೊಳಗೆ ಪೋಸ್ಟ್ ಡಿಲೀಟ್ ಮಾಡಬೇಕು ಮತ್ತು ನಿತಿನ್ ಗಡ್ಕರಿ ಬಳಿ ಮೂರು ದಿನದ ಅವಧಿಯೊಳಗೆ ಕ್ಷಮೆ ಕೇಳಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.