ಚಲಿಸುತ್ತಿದ್ದ ರೈಲಿನಿಂದ ಬಿದ್ದು ವಕೀಲ ಸಾವು..! ; ಟ್ರ್ಯಾಕ್ಟರ್-ಬೈಕ್ ಡಿಕ್ಕಿಯಾಗಿ ಬಾಲಕ ಸಾವು..!!

ಚಲಿಸುತ್ತಿದ್ದ ರೈಲಿನಿಂದ ಬಿದ್ದು ವಕೀಲ (Lawyer). ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್ ಬಳಿ ನಡೆದಿದೆ. ಚಿಕ್ಕಕುಂತೂರು ಗ್ರಾಮದ ಶ್ರೀಕಾಂತ್ ಮೃತ ವ್ಯಕ್ತಿ. ಬೆಂಗಳೂರು ಕೆ.ಆರ್.ಪುರಂನಿಂದ ಟೇಕಲ್ಗೆ ಹೋಗುವ ಮಾರ್ಗ ಮಧ್ಯೆ ಕಾವೇರಿ ಎಕ್ಸ್ಪ್ರೆಕ್ಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸ್ಥಳಕ್ಕೆ ರೈಲ್ವೇ ಕಂಟ್ರೋನ್ಮೆಂಟ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ಮಾಡಿದ್ದಾರೆ. ಕಂಟ್ರೋನ್ಮೆಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟ್ರ್ಯಾಕ್ಟರ್-ಬೈಕ್ ಡಿಕ್ಕಿಯಾಗಿ ಬಾಲಕ ಸಾವು
ಚಿಕ್ಕೋಡಿ: ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಟ್ರ್ಯಾಕ್ಟರ್-ಬೈಕ್ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಮೃತ ಬಾಲಕನನ್ನು ಆದರ್ಶ ಕುಮಾರ ಗುಪ್ತಾ (16) ಎಂದು ಗುರುತಿಸಲಾಗಿದೆ. ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿಸಿದ ಹುಡುಗಿಗೆ ಅಬಾರ್ಷನ್ ಮಾಡಿಸಿ ಕೈಕೊಟ್ಟು ಪರಾರಿಯಾದ ಪ್ರೇಮಿ
ಕೊಪ್ಪಳ: ಪ್ರೀತಿಸಿದ ಹುಡುಗಿಗೆ (Love Case) ಮದುವೆ ಆಗುವುದಾಗಿ ನಂಬಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಆಕೆ ಗರ್ಭಿಣಿಯೆಂದು ತಿಳಿದಾಕ್ಷಣ ಅಬಾರ್ಷನ್ ಮಾಡಿಸಿ ಅರ್ಧ ದಾರಿಯಲ್ಲೇ ಬಿಟ್ಟು ಹೋಗಿದ್ದಾನೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವರನಖೇಡದಲ್ಲಿ ಘಟನೆ ನಡೆದಿದೆ.
ವರನಖೇಡ ಗ್ರಾಮದ ಮಂಜುನಾಥ ಎಂಬಾತ ಆತನ ಅಣ್ಣ ಹನುಮೇಶ ನಾಯಕ ಸೇರಿ ಯುವತಿಗೆ ಗರ್ಭಪಾತ ಮಾಡಿಸಿದ್ದಾರೆ. ಅದೇ ಗ್ರಾಮದ ಯುವತಿಯನ್ನು ಮಂಜುನಾಥ ಎರಡು ವರ್ಷದಿಂದ ಪ್ರೀತಿಸುತ್ತಿದ್ದ. ಯುವತಿಯನ್ನು ಪುಸಲಾಯಿಸಿ ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದ.
ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆಯಿಂದ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಈ ನಡುವೆ ಮೂರು ದಿನಗಳ ಹಿಂದೆ ಮಂಜುನಾಥ ವಾಪಸ್ ಯುವತಿಯನ್ನು ಕರೆದುಕೊಂಡು ಬಂದಿದ್ದ. ಯುವತಿಗೆ ಹಿರೇವಂಕಲಕುಂಟಿ ವೈದ್ಯರೊಬ್ಬರಿಂದ ಅಬಾರ್ಷನ್ ಮಾಡಿಸಿ ಮಾದಿನಾಳ ಕ್ರಾಸ್ ಬಳಿ ಬಿಟ್ಟು ಹೋಗಿದ್ದಾನೆ.
ಸದ್ಯ ಕನಕಗಿರಿ ಪೊಲೀಸ್ ಠಾಣೆಯಲ್ಲಿದ್ದ ಯುವತಿಗೆ ರಕ್ತಸ್ರಾವ ಹೆಚ್ಚಾದ ಹಿನ್ನೆಲೆಯಲ್ಲಿ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಅಲ್ಲಿಂದ ಆಕೆಯನ್ನು ಗಂಗಾವತಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮಂಜುನಾಥ, ಹನುಮೇಶ ಹಾಗೂ ವೈದ್ಯರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.