ಸುಳ್ಯ ಪೇಟೆಯಲ್ಲಿ ದಿಡೀರ್ ಭೂಕುಸಿತ; ಟ್ರಾನ್ಸ್ಫಾರ್ಮರ್ ಧರೆಗೆ ಬಿದ್ದು ತಪ್ಪಿದ ಭಾರಿ ಅನಾಹುತ!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ (Sullia) ಶುಕ್ರವಾರ ರಾತ್ರಿ ಏಕಾಏಕಿ ಭೂಕುಸಿತ (Landslide) ಸಂಭವಿಸಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಸುಳ್ಯ ಪೇಟೆಯಲ್ಲಿರುವ ‘ಪರಿವಾರಕಾನ ಉಡುಪಿ ಗಾರ್ಡನ್’ ಹೋಟೆಲ್ ಬಳಿ ಭೂಕುಸಿತ ಸಂಭವಿಸಿದೆ. ಭೂಕುಸಿತವಾದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಇತ್ತು. ಭುಕುಸಿತವಾದ ಬೆನ್ನಲ್ಲೇ ಟ್ರಾನ್ಸ್ಫಾರ್ಮರ್ ಧರಾಶಾಯಿಯಾಗಿದೆ. ಅದೃಷ್ಟವಶಾತ್ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಬೀಳುವ ಸಂದರ್ಭ ಪವರ್ ಕಟ್ ಆಗಿದ್ದ ಕಾರಣ ದುರಂತ ತಪ್ಪಿದೆ.
ದಿಢೀರ್ ಭೂಕುಸಿತವಾಗಿದ್ದರಿಂದ ಸುಳ್ಯದ ಜನತೆ ಬೆಚ್ಚಿ ಬಿದ್ದಿದೆ. ಘಟನಾ ಸ್ಥಳಕ್ಕೆ ಮೆಸ್ಕಾ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಂಬ ತೆರವುಗೊಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಭೂಕುಸಿತ ಉಂಟಾದ ಭಾಗಕ್ಕೆ ಯಾರೂ ಹೋಗದಂತೆ ತಡೆದಿದ್ದಾರೆ.
ಈ ಮಧ್ಯೆ, ಸುಳ್ಯವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶುಕ್ರವಾರ ಮಳೆಯಾಗಿದೆ.
ನೆರೆಯ ಕೊಡಗು ಜಿಲ್ಲೆಯಲ್ಲಿಯೂ ಶುಕ್ರವಾರ ಸಂಜೆ ಹಾಗೂ ರಾತ್ರಿ ಭಾರೀ ಮಳೆಯಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ಸುತ್ತಮುತ್ತ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ಮಡಿಕೇರಿ ನಗರ, ಮೇಕೇರಿ, ಕಗ್ಗೋಡ್ಲು, ತಾಳತ್ಮನೆ ಸುತ್ತಮುತ್ತ ಮಳೆಯಾಗಿದೆ.