ಪಕ್ಷೇತರ ಸ್ಪರ್ಧೆ ಬಿಟ್ಟು ಬಿಜೆಪಿಗೆ ಬೆಂಬಲ ಎಂದ ಲೇಡಿ ರೆಬೆಲ್ ಸುಮಲತಾ ಅಂಬರೀಷ್..!

ಮಂಡ್ಯ ಲೋಕಸಭಾ ಕ್ಷೇತ್ರದ ಜಿದ್ದಾಜಿದ್ದಿಯಲ್ಲಿ ಇಂದು ಸುಮಲತಾ ಸಭೆಯಲ್ಲಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಹಿಂದೆ ಸರಿದ ಸುಮಲತಾ ಅಂಬರೀಷ್. ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗಲ್ಲ. ನಾನು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ ಎಂದ ಸುಮಲತಾ ಅಂಬರೀಷ್
ಈ ಬಾರಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಗೆ ನನ್ನ ಬೆಂಬಲ. ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಯಾಗಲಿದ್ದೇನೆ ಎಂದ ಸುಮಲತಾ ಅಂಬರೀಷ್
ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ. ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ. ಐದು ವರ್ಷಗಳಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ವಂದನೆಗಳು. ಜನಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ. ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು. ಕೆಆರ್ಎಸ್ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ. ಮೈಷುಗರ್ ಕಾರ್ಖಾನೆಗಾಗಿ ಎರಡು ವರ್ಷ ಹೋರಾಡಿದ್ದೇನೆ ಎಂದು ತಿಳಿಸಿದರು.
2019ರಲ್ಲಿ ಅದೊಂದು ಬೇರೆ ತರಹದ ಸವಾಲಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಿಸುತ್ತಿದ್ದೇನೆ. ಕೊನೆಗಳಿಗೆವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ನಿಂತುಕೊಳ್ಳೊಲು ಹೇಳಿದರು. ನನಗೆ ಬೇರೆ ಬೇರೆ ಕ್ಷೇತ್ರದ ಆಫರ್ ನೀಡಿದರು. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಗೆದ್ದರು, ಸೋತರು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದರು.
ನಾನು ಎಲ್ಲರಂತೆ ಟಿಪಿಕಲ್ ರಾಜಕಾರಣಿ ಅಲ್ಲ. ನನಗೆ ಬಿಜೆಪಿ ಹೈಕಮಾಂಡ್ ಬೇರೆ ಕಡೆಗೆ ಸ್ಪರ್ಧೆ ಮಾಡಲು ಸಾಕಷ್ಟು ಅವಕಾಶವನ್ನು ನೀಡಿತ್ತು. ಆದರೆ, ನನಗೆ ಮಂಡ್ಯ ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ನಿಮ್ಮನ್ನು ಹಾಗೂ ಅಂಬರೀಶ್ ಅವರ ಕನಸನ್ನು ಬಿಟ್ಟು ಹೋದರೆ ಯಾರೂ ಮೆಚ್ಚಲಾರರು. ಹಾಗಾಗಿ ನಾನು ಮಂಡ್ಯದಲ್ಲಿಯೇ ಇರುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.ಇಂದು ನಾನು ಸಂಸದೆ. ಆದರೆ, ನಾಳೆ ನನ್ನ ಜಾಗಕ್ಕೆ ಇನ್ನೊಬ್ಬರು ಬರುತ್ತಾರೆ. ಕೊನೆಯವರೆಗೂ ನಾನು ಅಂಬರೀಶ್ ಪತ್ನಿ ಎಂಬುದನ್ನು ಯಾರಿಂದಲೂ ಕಿತ್ತುಕೊಳ್ಳಲಾಗದು ಎಂದು ಸುಮಲತಾ ಅಂಬರೀಶ್ ಹೇಳಿದರು.
ಕಾಂಗ್ರೆಸ್‌ಗೆ ಎಂದಿಗೂ ಹೋಗಲ್ಲ
ನನ್ನ ಮುಂದಿನ ದಾರಿ ಏನೆಂಬುದನ್ನು ನೋಡಿದೆ. ಸ್ವತಂತ್ರ ಸ್ಪರ್ಧೆ ಮಾಡುವುದು ಸೂಕ್ತ ಅಲ್ಲ ಎಂದೆನಿಸಿತು. ಕಾಂಗ್ರೆಸ್‌ನವರೇ ನನ್ನನ್ನು ಬೇಡ ಎಂದ ಮೇಲೆ ಆ ಪಕ್ಷಕ್ಕೆ ನಾನು ಎಂದೂ ಹೋಗಲಾರೆ. ಆದರೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರೂ ನನಗೆ ನನ್ನ ಕ್ಷೇತ್ರಕ್ಕೆ 4 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಜೆಪಿ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕಿ ಇಲ್ಲ. ನನ್ನ ಬೆಂಬಲಕ್ಕೆ ಸದಾ ಇದ್ದಾರೆ. ಅಲ್ಲದೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಬೇಡ ಎಂದು ಸ್ವತಃ ಪ್ರಧಾನಿಯವರೇ ಕರೆದು ಹೇಳಿದ್ದಾರೆ. ಒಬ್ಬ ಪ್ರಧಾನಿಯೇ ನನಗೆ ಗೌರವ ಕೊಡುವಾಗ ನನಗೆ ಇನ್ನೇನು ಬೇಕು? ಹೀಗಾಗಿ ಈ ತೀರ್ಮಾನವನ್ನು ಕೈಗೊಂಡಿದ್ದೇನೆ ಎಂದು ಹೇಳಿದರು.
ಯಾರೇ ಬರಲಿ, ಎಲ್ಲಿಯೇ ಇರಲಿ. ಇಂಡಿಯಾ ಅಂದ್ರೆ ಮಂಡ್ಯ, ಮಂಡ್ಯ ಅಂದರೆ ಇಂಡಿಯಾ ಎಂಬಂತೆ ಕೆಲಸ ಮಾಡಿದ್ದೇನೆ. ನನಗೆ ಐದು ವರ್ಷಗಳ ಕಾಲ ಸಹಕಾರ ನೀಡಿದ, ಕಷ್ಟಕ್ಕೆ ನಿಂತ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಒಬ್ಬ ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಂತಾಗ ಸವಾಲುಗಳು ಬೆಟ್ಟದಷ್ಟಿತ್ತು. ಆದರೆ, ಜನರು ನನ್ನ ಕೈಬಿಡಲಿಲ್ಲ. ಸುಮಾರು 7 ಲಕ್ಷಕ್ಕಿಂತ ಹೆಚ್ಚಿನ ಮತಗಳನ್ನು ಹಾಕಿ 1.25 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ ಮಂಡ್ಯ ಜಿಲ್ಲೆಯ ಮತದಾರ ಪ್ರಭುವಿಗೆ ನನ್ನ ಅನಂತಾನಂತ ಧನ್ಯವಾದಗಳು ಎಂದು ಹೇಳಿದರು.