Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!
ಬೆಂಗಳೂರು: ಲೇಡಿಸ್ ಪಿಜಿಗೆ (Ladies PG) ನುಗ್ಗಿ ಯುವಕನೋರ್ವ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ (Bengaluru) ಕೋರಮಂಗಲದ (Koramangala) ವಿಆರ್ ಲೇಔಟ್‌ನಲ್ಲಿ ನಡೆದಿದೆ. ತಡರಾತ್ರಿ 11.10 ರಿಂದ 11.30ರ ಸುಮಾರಿಗೆ ಚಾಕು ಹಿಡಿದು ಪಿ.ಜಿಯೊಳಗೆ ನುಗ್ಗಿದ ಆರೋಪಿ, ಮೂರನೇ ಮಹಡಿಯಲ್ಲಿನ ರೂಮಿನ ಸಮೀಪದಲ್ಲೇ ಯುವತಿ ಮೇಲೆ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದಾನೆ.
ಬಿಹಾರ ಮೂಲದ ಕೃತಿ ಕುಮಾರಿ (24) ಕೊಲೆಯಾದ ಯುವತಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೃತಿ ಕುಮಾರಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಚಯಸ್ಥ ವ್ಯಕ್ತಿಯಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪಿ.ಜಿಯಲ್ಲಿನ ಭದ್ರತಾ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ 11:30ರ ವೇಳೆಗೆ ಘಟನೆ ನಡೆದಿದೆ. ರಾತ್ರಿ 11:10ರ ವೇಳೆಗೆ ಯುವಕ ಚಾಕು ಸಮೇತ ಪಿಜಿಯೊಳಗೆ ಬಂದಿದ್ದಾನೆ. ಮೂರನೇ ಮಹಡಿಯಲ್ಲಿರುವ ರೂಂ ಬಳಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೃತಿ ಕುಮಾರಿ ಮೊಬೈಲ್ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಅಕೆಯ ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್ ಪಡೆದಿದ್ದಾರೆ. ಕೊನೆಯದಾಗಿ ಯಾರಿಗೆ ಕಾಲ್ ಮಾಡಿದ್ದಾಳೆ. ಯಾವ ಯಾವ ನಂಬರ್ ನಿಂದ ಈಕೆಗೆ ಕಾಲ್ ಬಂದಿದೆ ಎಂದು ಪರಿಶೀಲನೆ ನಡೆಸುತ್ತಿದ್ದು, ಸಿಸಿಟಿವಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಪಿಜಿಗೆ ಯುವತಿ ಆಗಮಿಸಿದ್ದು ಯಾವಾಗ..? ಕೊನೆಯದಾಗಿ ಅಕೆ ಎಲ್ಲಿ ಎಲ್ಲಿ ಹೋಗಿದ್ದಾಳೆ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದು, ಮೂರು ವಿಶೇಷ ತಂಡ ರಚಿಸಿ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮುದ್ದಾದ ಎರಡು ಹೆಣ್ಣು ಮಕ್ಕಳನ್ನ ಹತ್ಯೆಗೈದಿದ್ದ ತಂದೆಗೆ ಜೀವಾವಧಿ ಶಿಕ್ಷೆ
ಬೆಳಗಾವಿ, ಜುಲೈ 23: ಮಾಟ ಮಾಡಿಸಿದ್ದಾರೆಂದು ಮಕ್ಕಳನ್ನ ಹತ್ಯೆಗೈದಿದ್ದ ತಂದೆಗೆ (father) ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿ ಬೆಳಗಾವಿ 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ 2021ರ ಜುಲೈ ತಿಂಗಳಿನಲ್ಲಿ ಮಕ್ಕಳನ್ನು ಅಪರಾಧಿ ತಂದೆ ಅನಿಲ್ ಚಂದ್ರಕಾಂತ ಬಾಂದೇಕರ್ ಹತ್ಯೆಗೈದಿದ್ದರು. ಬೆಳಗಾವಿ ತಾಲೂಕಿನ ಕಂಗ್ರಾಳಿಯಲ್ಲಿ ದುರ್ಘಟನೆ ನಡೆದಿತ್ತು. ಅನನ್ಯ(4) ಅಂಜಲಿ(8) ಮೃತ ಮಕ್ಕಳು.
ಮಕ್ಕಳ ಮೇಲೆ ಮಾಟ ಮಂತ್ರ ಆಗಿದೆ ಎಂದು ನೊಂದಿದ್ದ ತಂದೆ, ವಿಷ ಉಣಿಸಿ ತನ್ನೆರಡು ಮಕ್ಕಳನ್ನ ಕೊಲೆಗೈದಿದ್ದ. ತನ್ನ ಗಂಡನೇ ಮಕ್ಕಳನ್ನ ಕೊಲೆಗೈದಿದ್ದಾನೆಂದು ಆರೋಪಿ ಅನಿಲ್ ಪತ್ನಿ ಜಯಾ ಬಾಂದೇಕರ್ರಿಂದ ದೂರು ನೀಡಲಾಗಿತ್ತು.
ದೋಷಾರೋಪ ಪಟ್ಟಿ ಸಲ್ಲಿಸಿದ್ದ ಇನ್ಸ್ಪೆಕ್ಟರ್ ಮಂಜುನಾಥ್, ಪ್ರಕರಣದ ಕುರಿತು ಸರ್ಕಾರಿ ಅಭಿಯೋಜಕ ನಸರೀನ ಬಂಕಾಪೂರ ವಾದ ಮಂಡಿಸಿದ್ದರು. ಪ್ರಕರಣದ ಸುಧೀರ್ಘ ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಜುಲೈ 14ರ ಬೆಳಗಿನ ಜಾವ ಅನಿಲ್ ಬಾಂದೇಕರ್ ತನ್ನ ಇಬ್ಬರು ಹೆಣ್ಣು ಮಕ್ಕಳು ಜೊತೆ ಹೆಂಡತಿ ತವರು ಮನೆಯಿಂದ ತಾನು ವಾಸವಿದ್ದ ಬಾಡಿಗೆ ಮನೆಗೆ ಬಂದಿದ್ದಾನೆ. ಮನೆಗೆ ಬರುವ ವೇಳೆ ಹೋಟೆಲ್‌ನಿಂದ ಮಕ್ಕಳಿಗಾಗಿ ಎರಡು ಪ್ಲೇಟ್ ಇಡ್ಲಿ, ಡೈರಿ ಮಿಲ್ಕ್ ಚಾಕೊಲೇಟ್ ತಂದಿದ್ದಾನೆ. ಜೊತೆಗೆ ಒಂದು ವಿಷದ ಬಾಟಲ್ ಕೂಡ ತಂದಿದ್ದು ತನ್ನೆರಡು ಮಕ್ಕಳಿಗೆ ತಂದ ಇಡ್ಲಿಯಲ್ಲಿ ವಿಷ ಹಾಕಿ ತಿನ್ನಿಸಿದ್ದಾರೆ. ಇದಾದ ಬಳಿಕ ಮಕ್ಕಳಿಬ್ಬರನ್ನು ಉಸಿರುಗಟ್ಟಿಸಿ ಸಾಯಿಸಿ ನಂತರ ಆತನೂ ಆತ್ಮಹತ್ಯೆ ಮಾಡಿಕೊಂಡು ಸಾಯಲು ಯತ್ನಿಸಿದ್ದಾನೆ.
ಮಧ್ಯಾಹ್ನ ಮೂರು ಗಂಟೆಯಾದರೂ ಗಂಡ ವಾಪಸ್ ಬಾರದ ಹಿನ್ನೆಲೆ ಹೆಂಡತಿ ಜಯಶ್ರೀ ಕಂಗ್ರಾಳಿ ಕೆ.ಹೆಚ್. ಗ್ರಾಮದ ಮನೆಗೆ ಬಂದಿದ್ದಾಳೆ. ಬೆಲ್ ಬಾರಿಸಿದರೂ ಮನೆಯ ಬಾಗಿಲು ತೆಗೆಯದಿದ್ದಾಗ ಪಕ್ಕದಲ್ಲಿ ತೆರಳಿ ಕಿಟಕಿಯಿಂದ ಇಣುಕಿ ಒಳನೋಡಿದ್ದಾಳೆ. ಈ ವೇಳೆ ಇಬ್ಬರು ಹೆಣ್ಣು ಮಕ್ಕಳು ಮಲಗಿದ್ದು ಕಂಡಿದೆ. ಬಳಿಕ ಮನೆಯ ಮಾಲೀಕ ಹಾಗೂ ಅಕ್ಕಪಕ್ಕದವರ ಸಹಾಯದಿಂದ ಮನೆಯ ಬಾಗಿಲು ತೆರೆದು ಒಳಹೋಗಿದ್ದಾರೆ. ಆಗ ಇಬ್ಬರು ಹೆಣ್ಣು ಮಕ್ಕಳು ಅಸ್ವಸ್ಥವಾಗಿ ಬಿದ್ದಿದ್ದು ಕಂಡಿದೆ.
ಬಳಿಕ ಗಂಡ ಅನಿಲ್ ಕೈಯಿಂದ ರಕ್ತ ಸುರಿಯುತ್ತಿದ್ದು ಆತ ಪ್ರಜ್ಞಾಹೀನ ಸ್ಥಿತಿಯಲ್ಲಿರೋದು ಕಂಡಿದೆ. ತಕ್ಷಣ ಆಟೋದಲ್ಲಿ ಗಂಡ ಇಬ್ಬರು ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಎಂಟು ವರ್ಷದ ಪುತ್ರಿ ಅಂಜಲಿ, ನಾಲ್ಕು ವರ್ಷದ ಪುತ್ರಿ ಅನನ್ಯ ಮೃತಪಟ್ಟಿದ್ದರು. ಗಂಡ ಅನಿಲ್ ಕುಮಾರ್ ಸ್ಥಿತಿ ಗಂಭೀರವಿದ್ದ ಹಿನ್ನೆಲೆ ವೈದ್ಯರು ಆತನನ್ನು ಐಸಿಯುಗೆ ಶಿಫ್ಟ್ ಮಾಡಿದ್ದರು.