ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!
ಕುಂದಾಪುರ ನವೆಂಬರ್ 29: ಪ್ರೀತಿಯ ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ಮೊಮ್ಮಗ ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿದ ಘಟನೆ ಸೋಮವಾರ ನಡೆದಿದ್ದು, ಸಾವಿನಲ್ಲೂ ಅಜ್ಜ ಮೊಮ್ಮಗ ಒಂದಾದ ಮನಕಲಕುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಮೃತರನ್ನು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಆಜ್ರಿ ಗ್ರಾಮದ ಚೌಕುಳಮಕ್ಕಿ ನಿವಾಸಿ ಚೆನ್ನ ಪೂಜಾರಿ ಹಾಗೂ ಇಂದಿರಾ ಅವರ ಏಕೈಕ ಪುತ್ರ ನಿತೀಶ್ ಪೂಜಾರಿ (20) ಎಂದು ಗುರುತಿಸಲಾಗಿದೆ.
ಈತ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದು, ತಾತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೈಕ್ ನಲ್ಲಿ ಕುಂದಾಪುರಕ್ಕೆ ಹೊರಟಿದ್ದ, ಅವಸರದಲ್ಲಿ ಊರಿಗೆ ಬರುವುದು ಬೇಡ ಎಂದು ಮನೆಯವರು ಹೇಳಿದ್ದರೂ ಎತ್ತಿ ಆಡಿಸಿದ ಅಜ್ಜನ ಮೇಲಿನ ಮೋಹದಿಂದ ತನ್ನ ಬೈಕಿನಲ್ಲಿ ಕುಂದಾಪುರಕ್ಕೆ ಹೊರಟಿದ್ದರು. ಆದರೆ ಚಾಮರಾಜನಗರ ತಾಲೂಕಿನ ಪಣ್ಯದಹಂಡಿ ಬಳಿ ರಸ್ತೆ ಮಧ್ಯದ ಹಂಪ್ ಅನ್ನು ಗಮನಿಸದೇ ಅಕಸ್ಮಾತ್ತಾಗಿ ರಸ್ತೆಗೆ ಬಿದ್ದು ಮೃತಪಟ್ಟಿದ್ದರು. ಬಳಿಕ ಯುವಕನ ಮೃತದೇಹವನ್ನು ತಂದು ಶೇಡಿ ಮನೆಯಲ್ಲಿ ಅಜ್ಜ ಮೊಮ್ಮಗನ ಶವಸಂಸ್ಕಾರವನ್ನು ಜತೆಯಾಗಿ ನಡೆಸಲಾಯಿತು.
ನಟೋರಿಯಸ್ ಮನೆಗಳ್ಳನನ್ನು ಹಿಡಿದ ಉಡುಪಿ ಪೊಲೀಸರು
ಉಡುಪಿ ನವೆಂಬರ್ 29: ಇತ್ತೀಚೆಗೆ ಉಡುಪಿ ಇಂದಿರಾನಗರದ ಬಡಗಬೆಟ್ಟು ಗ್ರಾಮದ ಮನೆಯೊಂದರ ಹಿಂಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳನನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮಲ್ಲಾರಿನ ತೌಸಿಫ್ ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಕಳ್ಳತನ ಮಾಡಿದ್ದ ಸುಮಾರು 155 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 9 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿ ಮನೆಯ ಹಿಂಬಾಗಿಲು ಮುರಿದು ಒಳ ಪ್ರವೇಶಿಸಿ ಲಾಕರಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದ, ಪ್ರಕರಣ ತಿನಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ವಿರುದ್ದ ಬಂಟ್ವಾಳ, ಪಣಂಬೂರು, ಬಜ್ಪೆ ಠಾಣೆಗಳಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ಇನ್‌ಸ್ಪೆಕ್ಟರ್ ಡಿ.ಆರ್. ಮಂಜಪ್ಪ, ಪಿಎಸ್‌ಐ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ಪುನೀತ್ ಕುಮಾರ್, ಸಿಬ್ಬಂದಿ ಸತೀಶ್ ಬೆಳ್ಳೆ, ಚೇತನ್, ಆನಂದ, ಎಸ್. ಶಿವಕುಮಾರ್, ರಿಯಾಜ್ ಅಹಮದ್, ವಿಶ್ವನಾಥ ಶೆಟ್ಟಿ, ಕಿರಣ್, ಹೇಮಂತ್ ಕುಮಾರ್, ಓಬಳೇಶ್, ರಾಜೇಂದ್ರ ಅವರನ್ನೊಳಗೊಂಡ ತಂಡ ಆರೋಪಿ ತೌಸಿಫ್ ಅಹಮದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.