ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ....!
ಬೆಂಗಳೂರು, (ಡಿಸೆಂಬರ್ 25): ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ(kota srinivas poojary)ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಿದ್ದಾರೆ. ಎನ್ ರವಿ ಕುಮಾರ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಡುವೆ ವಿಧಾನಪರಿಷತ್ ವಿಪಕ್ಷ ಸ್ಥಾನಕ್ಕೆ ಪೈಪೋಟಿ ಇತ್ತು. ಅಂತಿಮವಾಗಿ ನಿರೀಕ್ಷೆಯಂತೆ ಬಿಜೆಪಿ ಹೈಕಮಾಂಡ್, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಣೆ ಹಾಕಿದೆ.
ವಿಧಾನಪರಿಷತ್ ವಿಪಕ್ಷ ನಾಯಕನ ಜೊತೆಗೆ ವಿಧಾನಸಭೆ ಉಪ ನಾಯಕ, ಮುಖ್ಯ ಸಚೇತಕರನ್ಉ ಸಹ ನೇಮಕ ಮಾಡಲಾಗಿದೆ.
ವಿಧಾನಪರಿಷತ್ ವಿಪಕ್ಷ ಉಪ ನಾಯಕನಾಗಿ ಸುನೀಲ್ ವಲ್ಯಾಪುರೆ ಅವರನ್ನು ನೇಮಕ ಮಾಡಿದರೆ, ವಿಧಾನಸಭೆಯ ವಿಪಕ್ಷ ಉಪ ನಾಯಕನಾಗಿ ಅರವಿಂದ ಬೆಲ್ಲದ್ ನೇಮಕವಾಗಿದ್ದಾರೆ. ಇನ್ನು ವಿಧಾನಸಭೆಯ ಮುಖ್ಯ ಸಚೇತಕರಾಗಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ನೇಮಕವಾದರೆ, ವಿಧಾನಪರಿಷತ್ನ ಮುಖ್ಯ ಸಚೇತಕರಾಗಿ ಎನ್.ರವಿಕುಮಾರ್ ಅವರನ್ನು ನೇಮಿಸಲಾಗಿದೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹಾಗೂ ಅಶೋಕ್ ಅವರನ್ನು ವಿಪಕ್ಷ ನಾಯಕನನ್ನಾಗಿ ನೇಮಕ ಮಾಡಿದ್ದಕ್ಕೆ ಅರವಿಂದ್ ಬೆಲ್ಲದ್ ಅಸಮಾಧಾನಗೊಂಡಿದ್ದರು. ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಅರವಿಂದ ಬೆಲ್ಲದ್ ಅವರನ್ನು ಸಮಾಧಾನಪಡಿಸಲು ವಿಧಾನಸಭೆ ವಿಪಕ್ಷ ನಾಯಕ ಸ್ಥಾನ ನೀಡಲಾಗಿದೆ.
ಇನ್ನು ವಿಪಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಸಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ವಿಧಾನಪರಿಷತ್ ವಿಪಕ್ಷ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ಇನ್ನು ವಿಧಾನಪರಿಷತ್ ವಿರೋಧ ಪಕ್ಷದ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಎನ್ ರವಿ ಕುಮಾರ್ ಅವರಿಗೆ ವಿಧಾನಪರಿಷತ್ ಮುಖ್ಯ ಸಚೇತಕ ಹುದ್ದೆ ನೀಡಲಾಗಿದೆ.
ಯತ್ನಾಳ್ ಮಾತನ್ನ ಯಾರೂ ಗಂಭೀರವಾಗಿ ತೆಗೆದುಕೊಳ್ಳಲ್ಲ, ದೀಪ ಆರುವಾಗ ಜಾಸ್ತಿ ಉರಿಯುತ್ತೆ: ಮುರುಗೇಶ್ ನಿರಾಣಿ
ಬಾಗಲಕೋಟೆ, ಡಿಸೆಂಬರ್ 25: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಮಾತನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಹಾದಿ ಬೀದಿಯಲ್ಲಿ ಹೋಗೋರು ಮಾತನಾಡಿದರೆ ಉತ್ತರ ಕೊಡಲ್ಲ. ಏನು ಮಾತಾಡ್ತಿದ್ದೀನಿ ಅಂತಾ ಅವರಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ. ದೀಪ ಆರುವಾಗ ಗಾಳಿಗೆ ಜಾಸ್ತಿ ಉರಿಯುತ್ತೆ ಎಂದು ಬಿಜೆಪಿ (BJP) ನೂತನ ಪದಾಧಿಕಾರಿಗಳ ಬಗ್ಗೆ ಯತ್ನಾಳ್ ಟೀಕೆ ಮಾಡಿರುವ ವಿಚಾರವಾಗಿ ಮಾತನಾಡಿದ ವಿಚಾರವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ (Muragesh Nirani) ಪರೋಕ್ಷವಾಗಿ ತಿರುಗೇಟು ನೀಡಿದರು.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದ ಜನ ರೊಚ್ಚಿಗೆದ್ದಿದ್ದಾರೆ. ಈ ಸರ್ಕಾರ ಹಿಂದೂಗಳಿಗೆ ತಾರತಮ್ಯ ಮಾಡುತ್ತಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ಜನ ಎದುರು ನೋಡುತ್ತಿದ್ದಾರೆ. ಈ ಸರ್ಕಾರ ತಾನಾಗೆ ಬಿದ್ದು ಹೋಗುತ್ತೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ. ಅದರ ಬಗ್ಗೆ ಮಾತನಾಡಿ ನಾವೇಕೆ ಪಾಪ ಕಟ್ಟಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಹಿಜಾಬ್ ನಿಷೇಧ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುತ್ತೇನೆ, ಬೆಳಿಗ್ಗೆ ಒಂದು, ಮದ್ಯಾಹ್ನ ಒಂದು ಮತ್ತು ಸಂಜೆ ಒಂದು ಹೇಳಿಕೆ ನೀಡುತ್ತಾರೆ. ಹಿಜಾಬ್ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದ್ದರೂ ಹೇಳಿಕೆ ನೀಡಿದ್ದಾರೆ. ಶಾಲೆಗೆ ಮಕ್ಕಳು ಯಾವ ಬೇಕಾದರೂ ಡ್ರೆಸ್ನಲ್ಲಿ ಬರಬಹುದು. ಸಿರಿವಂತರು, ಬಡವರು, ಮೇಲ್ಜಾತಿ-ಕೆಳಜಾತಿ ಎಂಬ ಬೇದ-ಭಾವ ಬರಬಾರದೆಂದು ಸಮವಸ್ತ್ರ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾನತೆ ಬೇಕಾಗಿಲ್ಲ. ಬಡವರು ಬಡವರಾಗಿ ಇರಬೇಕು. ಶ್ರೀಮಂತರು ಶ್ರೀಮಂತರಾಗಿ ಇರಬೇಕು ಎಂಬ ಆಸೆ ಇದೆ ಎಂದು ವಾಗ್ದಾಳಿ ಮಾಡಿದರು.
ಇಡೀ ಜಗತ್ತಿನಲ್ಲಿ ನಮ್ಮದು ಹಿಂದೂ ರಾಷ್ಟ್ರ. ಅಂತಹ ಭಾರತ ದೇಶದಲ್ಲಿ ಯಾರನ್ನು ಓಲೈಸುತ್ತಾರೆ ಅನ್ನೋದು ನಿತ್ಯ ನೋಡುತ್ತಿದ್ದೇವೆ. ಮುಸ್ಲಿಂ ಬಾಂಧವರಿಗೆ 10 ಸಾವಿರ ಕೋಟಿ ಮೀಸಲು ಇಡುತ್ತೇನೆ ಅಂತ ಹೇಳುತ್ತಿದ್ದಾರೆ. ಹಿಂದೂಗಳು ಏನು ಪಾಪ ಮಾಡಿದ್ದಾರೆ. ಹಿಂದೂಗಳಿಗೆ ಒಂದು ರೂಪಾಯಿನೂ ಘೋಷಣೆ ಮಾಡದ ಈ ಸರ್ಕಾರವನ್ನ ಕಿತ್ತು ಒಗೆಯಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದರು.