Kodagu: ಕೊಡಗು ಸೇರಿದಂತೆ ಪಶ್ಚಿಮ ಘಟ್ಟಗಳ ಭೂಕುಸಿತಗಳ ಅಧ್ಯಯನ, ತಡೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನಿರಂತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯಿಂದ 100 ಕೋಟಿ ಅನುದಾನ ಘೋಷಣೆ
ಬೆಂಗಳೂರು: ಕೊಡಗು (Kodagu) ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ನಿರಂತರ ಭೂಕುಸಿತ ಸಂಭವಿಸುವ ಕುರಿತು ಮಾಧ್ಯಮ , ಟ್ವೀಟ್ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಮೂಲಕ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಈ ವಿಷಯದ ಗಂಭೀರತೆಯ ಕುರಿತಂತೆ ಗಮನ ಸೆಳೆದಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶ್ಚಿಮ ಘಟ್ಟದ ಭೂಕುಸಿತದ ಅಧ್ಯಯನ ಹಾಗೂ ಇತರ ತಡೆ ಕಾರ್ಯಕ್ರಮಗಳಿಗೆ 100 ಕೋಟಿ ಅನುದಾನವನ್ನು ಘೋಷಿಸಿದ್ದಾರೆ.
ನಿರಂತರವಾದ ಟ್ವೀಟ್, ಮಾಧ್ಯಮ ಹೇಳಿಕೆ ಹಾಗೂ ಸರಕಾರಕ್ಕೆ ಮನವಿಯ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಡಾ. ಮಂತರ್ ಗೌಡ ವಿವರಿಸಿದ್ದರು.
ಕೊಡಗು (Kodagu) ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಭೂಕುಸಿತವನ್ನು ತಡೆಯಲು ನಾವು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಹಾಗು ಇತರ ಸಂಸ್ಥೆಗಳೊಂದಿಗೆ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂಬುದನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನಿರಂತರವಾಗಿ ವಾದಿಸುತ್ತಾ ಬಂದಿದ್ದರು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ವಾದವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಈಗ ಅಧ್ಯಯನಕ್ಕಾಗಿ 100 ಕೋಟಿ ಅನುದಾನವನ್ನು ಘೋಷಿಸಿ ಒಂದು ಹಂತದಲ್ಲಿ ನಿಜವಾದ ಅಧ್ಯಯನಕ್ಕೆ ಚಾಲನೆ ನೀಡಿದೆ.
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಭೂಕುಸಿತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಭೂಕುಸಿತ ಪರಿಸ್ಥಿತಿ ಎದುರಿಸುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವೈಗ ಪರಿಸರದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂಬ ಪ್ರಕೃತಿಯ ಎಚ್ಚರಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಯಾವತ್ತಿಗೂ ಸ್ಟ್ರಾಂಗ್, ಅದಕ್ಕೆ ಅವರಿಗೆ ಹುಲಿ ಎಂದು ಹೆಸರು
ಉಡುಪಿ: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣದ ವೇಳೆ ಬುಲೆಟ್ ಪ್ರೂಫ್ ತೆಗೆಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕರ್ನಾಟಕ ರಾಜ್ಯ ಶಾಂತಿ ಪ್ರಿಯರು. ಕರ್ನಾಟಕ ರಾಜ್ಯದಲ್ಲಿ ಬುಲೆಟ್ ಪ್ರೂಫ್ ಬೇಕಾ, ನಮ್ಮ ಸಿದ್ದರಾಮಯ್ಯನವರು ಯಾವತ್ತೂ ಸ್ಟ್ರಾಂಗ್ ಅದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯ ನವರಿಗೆ ಹುಲಿ ಎಂದು ಹೆಸರು ಬಂದಿರುವುದು ಇದಕ್ಕೆ ಎಂದು ಹೊಗಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರವಂತೆ – ಸೋಮೇಶ್ವರ ಬೀಚ್ ಬಂದರು ಕಾಮಗಾರಿ ವಿಳಂಬವಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಸಂಬಂಧ ಗುತ್ತಿಗೆದಾರ ಬಿರಾದಾರ್ ಜೊತೆ ಮಾತನಾಡಿದ್ದೇನೆ. ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ. ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಉಡುಪಿಯಲ್ಲಿ ಕಡಲ್ಕೊರೆತದಿಂದ ಉಂಟಾಗುತ್ತಿರುವ ಸಮಸ್ಯೆಯ ಪರಿಹಾರಕ್ಕಾಗಿ 5 ರಿಂದ 10 ಕೋಟಿ ಬಿಡುಗಡೆ ಮಾಡಿಸಿಕೊಂಡು ಬರುವುದಾಗಿ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದಲ್ಲಿ ಕೆಲವು ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗೆ ಉನ್ನತೀಕರಿಸುವ ಪ್ರಕ್ರಿಯೆ ಜಾರಿಯಲ್ಲಿದೆ, ವರದಿ ಬಂದ ತಕ್ಷಣ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.
ಕಂಚಿನಡ್ಕ ಬಳಿ ಟೋಲ್ ಗೇಟ್ ಗೆ ವಿರೋಧವಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದ್ದು, ನಾಲ್ಕು ಕಿಲೋಮೀಟರ್ ನಲ್ಲಿ ಎರಡು ಟೋಲ್ ಗೇಟ್ ಬಂದಿರುವುದು ಬಹಳ ಚರ್ಚೆಯಾಗುತ್ತಿದೆ. ಜಿಲ್ಲಾಧಿಕಾರಿ, ಎಸ್ ಪಿ, ಇತರ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸುವೆ. ಅಲ್ಲಿರುವ ಸಮಸ್ಯೆ ಏನು ಎಂದು ನೋಡುತ್ತೇನೆ. ಎರಡು ಕಡೆ ಸುಂಕ ಕೊಡುವುದು ಜನರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.
ಕೆರೆಗೆ ಬಿದ್ದ ಚಪ್ಪಲಿ ತೆಗೆಯಲು ಹೋಗಿ ಅಪ್ರಾಪ್ತ ಸೇರಿ ಇಬ್ಬರು ಸಾವು
ಹಾಸನ, ಆ.15: ಕೆರೆಯಲ್ಲಿ ಮುಳುಗಿ ಓರ್ವ ಅಪ್ರಾಪ್ತ ಸೇರಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು(Belur) ತಾಲ್ಲೂಕಿನ ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿನಡೆದಿದೆ. ಶ್ರೀಕಾಂತ್ (15) ಹಾಗೂ ವಿಜಯ್ (18) ಮೃತ ದುರ್ದೈವಿಗಳು. ಕೆರೆಗೆ ಮೀನು ಹಿಡಿಯಲು ತೆರಳಿದ್ದ ವೇಳೆ ದಿಢೀರ್ ಮಳೆ ಬಂದಿದೆ. ತಕ್ಷಣ ರಕ್ಷಣೆ ಪಡೆಯಲು ಕೆರೆಯ ಪಕ್ಕದಲ್ಲಿದ್ದ ಮರದ ಕೆಳಗೆ ಇಬ್ಬರು ನಿಂತಿದ್ದರು.
ಈ ಸಂದರ್ಭದಲ್ಲಿ ವಿಜಯ್ ಎಂಬಾತನ ಒಂದು ಕಾಲಿನ ಚಪ್ಪಲಿ ಕೆರೆಗೆ ಬಿದ್ದಿದ್ದು, ಶ್ರೀಕಾಂತ್ ಚಪ್ಪಲಿ ತೆಗೆದುಕೊಳ್ಳಲು ನೀರಿಗೆ ಇಳಿದಿದ್ದಾನೆ. ಕೆರೆಯಲ್ಲಿ ಹೂಳು, ಗಿಡ, ಗಂಟೆಗಳು ಬೆಳೆದಿದ್ದರಿಂದ ಕೆರೆಯ ನೀರಲ್ಲಿ ಶ್ರೀಕಾಂತ್ ಸಿಲುಕಿ ಒದ್ದಾಡಿದ್ದಾನೆ. ಕೂಡಲೇ ಶ್ರೀಕಾಂತ್ ರಕ್ಷಣೆಗೆ ವಿಜಯ್ ತೆರಳಿದ್ದು, ಈಜು ಬಾರದಿದ್ದರಿಂದ ಕೆರೆಯಲ್ಲಿ ಮುಳುಗಿ ಇಬ್ಬರು ಅಸುನೀಗಿದ್ದಾರೆ. ಇದೀಗ ಮುಳುಗು ತಜ್ಞರು ಸ್ಥಳಕ್ಕಾಗಮಿಸಿ ಇಬ್ಬರ ಮೃತದೇಹವನ್ನ ಹೊರತೆಗೆಯಲಾಗಿದೆ. ಇನ್ನು ಮಕ್ಕಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.