ಹಿಂದೂ ಬಾಲಕಿಯ ಅಪಹರಣ, ಮತಾಂತರ, ಮದುವೆ; ಪೋಷಕರ ಜೊತೆ ಕಳುಹಿಸಲು ಪಾಕ್ ಕೋರ್ಟ್ ನಿರಾಕರಣೆ
ಇಸ್ಲಾಮಾಬಾದ್: ಕಿಡ್ನ್ಯಾಪ್ ಆಗಿ ಬಲವಂತವಾಗಿ ಇಸ್ಲಾಂಗೆ (Islam) ಮತಾಂತರಗೊಂಡು (Conversion) ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ 14 ವರ್ಷದ ಹಿಂದೂ ಬಾಲಕಿಯನ್ನು ಆಕೆಯ ಪೋಷಕರ ಜೊತೆಗೆ ಕಳುಹಿಸಿಕೊಡಲು ಪಾಕಿಸ್ತಾನ ಕೋರ್ಟ್ (Pakistan Court) ನಿರಾಕರಿಸಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳ ಮನೆಗೆ ನುಗ್ಗಿ, ಬಂದೂಕು ತೋರಿಸಿ 14 ವರ್ಷದ ಬಾಲಕಿಯನ್ನು ಅಪಹರಿಸಲಾಯಿತು. ನಂತರ ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಮುಸ್ಲಿಂ ಪುರುಷನೊಂದಿಗೆ ವಿವಾಹ ಮಾಡಲಾಗಿದೆ. ಬಾಲಕಿಯನ್ನು ಶನಿವಾರ ಬೆನ್‌ಜಿರಾಬಾದ್ ಜಿಲ್ಲಾ ನ್ಯಾಯಾಲಯದ ಎದುರು ಪೊಲೀಸರು ಹಾಜರುಪಡಿಸಿದರು. ತನ್ನ ಪೋಷಕರೊಂದಿಗೆ ತೆರಳುವುದಾಗಿ ಹೇಳಿದರೂ ಕೋರ್ಟ್ ಬಾಲಕಿಗೆ ಅನುಮತಿ ನೀಡಿಲ್ಲ.
ಬೆನ್‌ಜಿರಾಬಾದ್ ಜಿಲ್ಲೆಯ ಮನೆಯಿಂದ ಜೂ.2ರಂದು ಸೊಹನಾ ಶರ್ಮಾ ಕುಮಾರಿ(14)ಯನ್ನು ತಾಯಿಯ ಎದುರೇ ಬಂದೂಕು ತೋರಿಸಿ, ಮನೆಪಾಠ ಮಾಡುತ್ತಿದ್ದ ಶಿಕ್ಷಕ ಮತ್ತು ಆತನ ಸಹಚರರು ಅಪಹರಿಸಿದ್ದರು. ಈ ಕುರಿತು ಬಾಲಕಿಯ ತಂದೆ ದಿಲೀಪ್ ಕುಮಾರ್ ದೂರು ದಾಖಲಿಸಿದ್ದರು. ನಂತರ, ಬಾಲಕಿಯನ್ನು ಇಸ್ಲಾಂಗೆ ಮತಾಂತರಿಸಿ, ವಿವಾಹ ಮಾಡಿದ ವಿಡಿಯೋವನ್ನು ಪೋಷಕರಿಗೆ ಅಪಹರಣಕಾರರು ಕಳುಹಿಸಿದ್ದರು.
ಪೊಲೀಸರು ಪ್ರಕರಣ ಭೇದಿಸಿ, ಬಾಲಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದರೆ ಬಾಲಕಿಯ ಇಚ್ಛೆಯ ವಿರುದ್ಧ ಕೋರ್ಟ್, ಆಕೆಯನ್ನು ಮಹಿಳಾ ಆಶ್ರಯ ತಾಣಕ್ಕೆ ಕಳುಹಿಸಿದೆ. “ಬಾಲಕಿಗೆ ಇನ್ನೂ 14 ವರ್ಷ. ಆದರೆ ಆಕೆಯ ಸಮ್ಮತಿಯಿಂದ ಮದುವೆ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಮಾಣಪತ್ರ ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನವಳಾದ ಅವಳ ಮದುವೆ ಕಾನೂನು ಬಾಹಿರ,’ ಎಂದು ಬಾಲಕಿಯ ತಂದೆ ಅವಲತ್ತುಕೊಂಡಿದ್ದಾರೆ.
ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು:
ಮೊಗಡಿಶು: ಜಗತ್ತಿನ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾದ ಸೊಮಾಲಿಯಾದಲ್ಲಿ (Somalia) ಸ್ಫೋಟ ಸಂಭವಿಸಿದ್ದು, 25 ಮಕ್ಕಳು ಸೇರಿದಂತೆ 27 ಮಂದಿ ಸಾವಿಗೀಡಾಗಿದ್ದಾರೆ.
ಪೂರ್ವ ಲೋವರ್ ಶಾಬೆಲ್ಲೆಯ ಜನಾಲೆ ಪ್ರದೇಶದ ಮುರಾಲೆ ಗ್ರಾಮದ ಫುಟ್ಬಾಲ್ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ. ಹಳೆಯ ಬಾಂಬ್‌ನ ಅವಶೇಷಗಳು ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ. ಸ್ಫೋಟದಲ್ಲಿ 53 ಮಕ್ಕಳು ಗಾಯಗೊಂಡಿದ್ದಾರೆ.
ಕ್ರೊಯೊಲಿ ಪಟ್ಟಣದ ಉಪ ಜಿಲ್ಲಾಧಿಕಾರಿ ಅಬ್ದಿ ಅಹ್ಮದ್ ಅಲಿ, “ಹಳ್ಳಿಯ ತೆರೆದ ಮೈದಾನದಲ್ಲಿ ಮಕ್ಕಳು ಆಡುತ್ತಿದ್ದಾಗ ಬಾಂಬ್‌ಗಳು ಮತ್ತು ನೆಲಬಾಂಬ್‌ಗಳಂತಹ ಯುದ್ಧದ ಸ್ಫೋಟಕ ಅವಶೇಷಗಳು ಸ್ಫೋಟಿಸಿವೆ” ಎಂದು ತಿಳಿಸಿದ್ದಾರೆ.
ಮೃತರ ಪೈಕಿ 22 ಮಕ್ಕಳ ಶವಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇನ್ನಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಾಗಲೇ ಅವರೂ ಕೊನೆಯುಸಿರೆಳೆದಿದ್ದರು. ಮೊಗಾದಿಶುಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಮತ್ತೊಂದು ಮಗು ಸಾವಿಗೀಡಾಗಿದೆ.