ಕತ್ರೀನಾ ಕೈಫ್ ಫೊಟೋ ಡೀಪ್ ಫೇಕ್ ; ಅಶ್ಲೀಲವಾಗಿ ಜಾಲತಾಣದಲ್ಲಿ ವೈರಲ್..!
ಮುಂಬಯಿ: ಕಳೆದ ಕೆಲ ದಿನಗಳಿಂದ ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿರುವ ಡೀಪ್ ಫೇಕ್ ವಿಡಿಯೋದಿಂದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಸಮಾಧಾನಗೊಂಡಿದ್ದಾರೆ. ಇಂಥ ಹೇಯ ಕೃತ್ಯದಿಂದ ಕುಗ್ಗಿಹೋಗಿರುವ ರಶ್ಮಿಕಾ ಅವರ ಬೆಂಬಲಕ್ಕೆ ಸಿನಿಮಾರಂಗ ನಿಂತಿದೆ.
ಬ್ರಿಟಿಷ್ – ಇಂಡಿಯನ್ ಸೋಶಿಯಲ್ ಮೀಡಿಯಾ ತಾರೆ ಝಾರ ಪಟೇಲ್ ಅವರ ವಿಡಿಯೋಗೆ ರಶ್ಮಿಕಾ ಅವರ ಮುಖವನ್ನು ಜೋಡಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು. ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವು ಕಲಾವಿದರು ರಶ್ಮಿಕಾ ಪರ ಬೆಂಬಲಕ್ಕೆ ನಿಂತಿದ್ದಾರೆ.
ಈ ಸುದ್ದಿ ಸದ್ದಿನಲ್ಲಿರುವಾಗಲೇ ಇದೀಗ ಮತ್ತೊಬ ನಟಿ ಎಐ ತಂತ್ರಜ್ಞಾನದ ದುರುಪಯೋಗದ ಬಲೆಯಲ್ಲಿ ಸಿಲುಕಿದ್ದಾರೆ. ಬಿಟೌನ್ ಬ್ಯೂಟಿ ಕತ್ರಿನಾ ಕೈಫ್ ಅವರ ಸಿನಿಮಾದ ಫೋಟೋವೊಂದನ್ನು ಮಾರ್ಫಿಂಗ್ ಮಾಡಿ ವೈರಲ್ ಮಾಡಲಾಗಿದೆ.
ಸಲ್ಮಾನ್ ಖಾನ್ ಅವರ ʼಟೈಗರ್-3ʼ ಸಿನಿಮಾದಲ್ಲಿ ನಟಿ ಕತ್ರಿನಾ ಕೈಫ್ ಅವರು ಟವೆಲ್ ಹಾಕಿಕೊಂಡು ಪೈಟ್ ಮಾಡುವ ದೃಶ್ಯವೊಂದಿದೆ. ಈ ದೃಶ್ಯವನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಈ ದೃಶ್ಯದ ಸ್ಕ್ರೀನ್ ಶಾಟ್ ನ್ನು ಬಳಸಿಕೊಂಡು ಅದನ್ನು ಡೀಪ್ ಫೇಕ್ ಫೋಟೋವನ್ನಾಗಿ ಮಾರ್ಫ್ ಮಾಡಲಾಗಿದೆ. ಪೋಟೋವನ್ನು ಎಐ ತಂತ್ರಜ್ಞಾನದ ಮೂಲಕ ಆಶ್ಲೀಲ ರೀತಿ ಮಾರ್ಫಿಂಗ್ ಮಾಡಿ ವೈರಲ್ ಮಾಡಲಾಗಿದೆ. ಆ ಬಳಿಕ ಸೋಶಿಯಲ್ ಮೀಡಿಯಾದಿಂದ ಆ ಫೋಟೋವನ್ನು ಡಿಲೀಟ್ ಮಾಡಲಾಗಿದೆ.
ಸದ್ಯ ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೀಪ್ ಫೇಕ್ ಬಳಸಿ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.