ಕಾಸರಗೋಡು : ಮೇಜಿನ ಮೇಲೆ ಇಟ್ಟಿದ್ದ ಅಂಗಡಿ ಮಾಲೀಕನ ಮೊಬೈಲ್ ಕದ್ದು ಪರಾರಿಯಾದ ಗ್ರಾಹಕ!
ಕಾಸರಗೋಡು ನವೆಂಬರ್ 2: ಅಂಗಡಿಯ ಮಾಲೀಕನ ಮೊಬೈಲ್ ನ್ನು ಅಂಗಡಿಗೆ ಸಾಮಾನು ತೆಗೆದುಕೊಳ್ಳಲು ಬಂದಿದ್ದ ಗ್ರಾಹಕನೊಬ್ಬ ಕಳ್ಳತನ ಮಾಡಿದ ಘಟನೆ ಕಾಸರಗೋಡಿನ ಬೇಕಲ ಠಾಣಾ ವ್ಯಾಪ್ತಿಯ ಚಿತ್ತಾರಿಯಲ್ಲಿ ನಡೆದಿದೆ.
ಚಿತ್ತಾರಿ ಚೇಟುಕುಂಡು ಎಂಬಲ್ಲಿನ ಸೂಪರ್ ಮಾರ್ಕೆಟ್ ನಲ್ಲಿ ಈ ಕಳ್ಳತನ ನಡೆದಿದ್ದು ಮೊಬೈಲ್ ಫೋನ್ ಕಳವು ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಕ್ಟೋಬರ್ 18ರಂದು ರಾತ್ರಿ 10:45ರ ಸುಮಾರಿಗೆ ಸೂಪರ್ ಮಾರ್ಕೆಟ್ ಗೆ ಸಾಮಗ್ರಿ ಖರೀದಿಸುವ ನೆಪದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಈ ಕೃತ್ಯ ನಡೆಸಿದ್ದಾನೆ.
ಆತ ಕೇಳಿದ ಸಾಮಗ್ರಿಯನ್ನು ಮಾಲಕ ಹುಡುಕುತ್ತಿದ್ದಂತೆ ಮೇಜಿನ ಮೇಲೆ ಇಟ್ಟಿದ್ದ ಮೊಬೈಲ್ ಫೋನ್ ಅನ್ನು ಎಗರಿಸಿ ಆತ ಪರಾರಿಯಾಗಿದ್ದಾನೆ. ಕಳವಾದ ಮೊಬೈಲ್ ಮೌಲ್ಯ ಸುಮಾರು 30 ಸಾವಿರ ರೂ. ಎಂದು ಹೇಳಲಾಗಿದೆ.ಈ ಬಗ್ಗೆ ಸೂಪರ್ ಮಾರ್ಕೆಟ್ ಮಾಲಕ ಮುಹಮ್ಮದ್ ರಫೀಕ್ ಬೇಕಲ ಠಾಣೆಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿ – ಬೈಕ್ ಮತ್ತು ಲಾರಿ ನಡುವೆ ಅಪಘಾತ ಬೈಕ್ ಸವಾರ ಸಾವು
ಉಪ್ಪಿನಂಗಡಿ ನವೆಂಬರ್ 2: ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ನವೆಂಬರ್ 1 ರಂದು ರಾತ್ರಿ ರಾ.ಹೆ. 75ರ ನೆಲ್ಯಾಡಿ ಸಮೀಪ ವರದಿಯಾಗಿದೆ.
ಮೃತ ಬೈಕ್ ಸವಾರನನ್ನು ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಸಮೀಪದ ನಿವಾಸಿ ಸುರೇಂದ್ರ ಮಹತೋ (35) ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಂದ್ರ ಮಹತೋ ಬುಧವಾರ ರಂದು ರಾತ್ರಿ ಹೊಸಮಜಲು ಕಡೆಯಿಂದ ನೆಲ್ಯಾಡಿಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮಂಗಳೂರಿನಿಂದ ಹಾಸನ ಕಡೆಗೆ ಹೋಗುತ್ತಿದ್ದ ಇಕೊಮೆಟ್ ಲಾರಿ ಢಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸುರೇಂದ್ರ ಮೆಹತೋ ಅವರನ್ನು ತಕ್ಷಣ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟರು ಎಂದು ವರದಿಯಾಗಿದೆ.