ಏಜೆಂಟರ ಮೂಲಕ ಕೆಲಸಕ್ಕೆಂದು ರಷ್ಯಾಕ್ಕೆ ಹೋದ ಕರ್ನಾಟಕದ ಯುವಕರು ರಷ್ಯಾ ಉಕ್ರೇನ್ ಯುದದ್ದ ಸೇನೆಗೆ ಬಳಕೆ; ಏನಿದು ಆರೋಪ?
ಕಲಬುರಗಿ, ಫೆಬ್ರವರಿ 22: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿ ಅಪಾಯ ಸಿಲುಕುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಉದ್ಯೋಗದ ಹೆಸರಿನಲ್ಲಿ ಕರೆಸಿಕೊಂಡು ನಮ್ಮ ರಾಜ್ಯದ ಕಲಬುರಗಿ ಜಿಲ್ಲೆಯ ಯುವಕರನ್ನು ರಷ್ಯಾದಲ್ಲಿ ಯುದ್ಧಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ವಿದೇಶದಲ್ಲಿ ಕೆಲಸ ಮಾಡುವ ಆಸೆಯಿಂದ ಏಜೆಂಟ್ ಮೂಲಕ ರಷ್ಯಾಗೆ ತೆರಳಿದ ಕಲಬುರಗಿ ಮೂಲದ ಮೂರು ಯುವಕರನ್ನು ಅಲ್ಲಿ ಯುದ್ಧಕ್ಕೆ ಬಳಕೆ ಮಾಡಿರುವ ಸಂಗತಿ ವಿಡಿಯೋ ಸಮೇತ ಬೆಳಕಿಗೆ ಬಂದಿದೆ. ಕಲಬುರಗಿ ಮೂಲದ ಯುವಕರು ರಕ್ಷಣೆಗಾಗಿ ಪರದಾಡುತ್ತಿದ್ದು, ಇಲ್ಲಿಂದ ರಕ್ಷಿಸಿ ತಮ್ಮ ತಾಯ್ನಾಡಿಗೆ ವಾಪಸ್ ಕರೆಸಿಕೊಳ್ಳಿ ಎಂದು ವಿಡಿಯೋದ ಮೂಲಕ ಯುವಕರು ನೋವು ತೋಡಿಕೊಂಡಿದ್ದಾರೆ.
ಕಲಬುರಗಿ ಮೂಲದ ಮೂವರು ದುಬೈ ಏಜೆಂಟರ ಮೂಲಕ ರಷ್ಯಾಕ್ಕೆ ತೆರಳಿದ್ದಾರೆ. ರಷ್ಯಾದಲ್ಲಿ ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ಏಜೆಂಟರು ಕಳುಹಿಸಿದ್ದಾರೆ. ಆದರೆ ಅಲ್ಲಿ ಸೂಕ್ತ ಕೆಲಸ ಕೊಡಿಸದೇ ಸೆಕ್ಯುರಿಟಿ ಕೆಲಸದ ಬದಲಿಗೆ ರಷ್ಯಾ ಉಕ್ರೇನ್ ಯುದ್ದಕ್ಕೆ ಅವರನ್ನು ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕೆಲಸಕ್ಕಾಗಿ ಕಲಬುರಗಿಯ 4 ಯುವಕರು ಸೇರಿ ಭಾರತದ 6 ಯುವಕರು ಬಾಬಾ ಏಜೆಂಟ್ ಮೂಲಕ 2023 ಡಿಸೆಂಬರ್ 5ರಂದು ರಷ್ಯಾಕ್ಕೆ ತೆರಳಿದ್ದರು. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಕ ಪ್ರತಿಯೊಬ್ಬ ಯುವಕರ ಬಳಿ ಮೂರು ಲಕ್ಷ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ. ಆದರೆ ಈಗ ಕೆಲಸವೂ ಕೊಡದೆ ಸಂಕಷ್ಟಕ್ಕೆ ಸಿಲುಕಿಸಿದ್ದಾನೆ. ಕಲಬುರಗಿಯ ಆಳಂದ ತಾಲೂಕಿನ ನರೋಣದ ಸೈಯದ್ ಇಲಿಯಾಸ್ ಹುಸೇನ್, ಮೊಹಮ್ಮದ್ ಸಮೀರ್ ಅಹಮದ್, ಸೋಫಿಯಾ ಮೊಹಮ್ಮದ್ ರಷ್ಯಾದಲ್ಲಿ ಸಿಲುಕಿಕೊಂಡಿದ್ದಾರೆ.
“ದುಬೈ ಮೂಲದ ವ್ಯಕ್ತಿ ಬಾಬಾ ಎನ್ನುವಾತ ರಷ್ಯಾದಲ್ಲಿ ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಲ್ಲಿಗೆ ಕಳುಹಿಸಿದ್ದಾನೆ ಆದರೆ ಇಲ್ಲಿ ಯುದ್ಧಕ್ಕೆ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ನಮಗೆ ಮೋಸ ಮಾಡಿದ್ದಾರೆ. ನಾವೀಗ ಗಡಿಯಲ್ಲಿದ್ದೇವೆ. ಬಾಬಾ ಎನ್ನುವಾತ ಫ್ರಾಡ್ ಕೆಲಸ ಮಾಡುತ್ತಿದ್ದಾನೆ. ನಮ್ಮ ಈಗಿನ ಪರಿಸ್ಥಿತಿ ನೋಡಿ” ಎಂದು ಯುವಕರು ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಸದ ಅಸಾದುದ್ದೀನ್ ಓವೈಸಿ ರಷ್ಯಾದಲ್ಲಿ ಸಿಲುಕಿದ ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.