Karnataka Government: ಆಗಸ್ಟ್ 1ರಿಂದಲೇ ಏಳನೇ ವೇತನ ಆಯೋಗದ ಜಾರಿಗೆ ಸರ್ಕಾರ ತೀರ್ಮಾನ
Karnataka Government: ಆಗಸ್ಟ್ 1ರಿಂದಲೇ ಏಳನೇ ವೇತನ ಆಯೋಗದ ಜಾರಿಗೆ ಸರ್ಕಾರ ತೀರ್ಮಾನ. ಸರ್ಕಾರಿ ನೌಕರರ ಬೇಡಿಕೆ ಈಡೇರಿಸದಿದ್ದರೆ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ರಾಜ್ಯ ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಿ ನೌಕರರಿಗೆ ಸೋಮವಾರ ಸಿಹಿ ಸುದ್ದಿ ನೀಡಿದ್ದು, ಬಹು ನಿರೀಕ್ಷಿತ 7ನೇ ವೇತನ ಆಯೋಗದ ವರದಿಯ ಶಿಫಾರಸು ಆಗಸ್ಟ್ 1ರಿಂದಲೇ ಜಾರಿಗೆ ಬರಲಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಗಸ್ಟ್ 1 ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ನೌಕರರ ವೇತನ ಶೇ 27.5 ರಷ್ಟು ಹೆಚ್ಚಾಗಲಿದೆ.
7ನೇ ವೇತನ ಆಯೋಗ ಜಾರಿಗೊಳಿಸದಿದ್ದರೆ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಮಾರ್ಚ್ 16 ರಂದು ಶೇ. 27.5 ರಷ್ಟು ವೇತನ ಪರಿಷ್ಕರಣೆ ಮಾಡುವ ಶಿಫಾರಸು ಒಳಗೊಂಡ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಬಳಿಕ ಸಿಎಂ, ಇದನ್ನು ಜಾರಿಗೆ ತರುವ ಬಗ್ಗೆ ಹಣಕಾಸು ಇಲಾಖೆಗೆ ಮಾಹಿತಿ ಕೇಳಿದ್ದರು. ಇದೀಗ ಹಣಕಾಸು ಇಲಾಖೆ ವರದಿ ಬಳಿಕ ಸಿದ್ದರಾಮಯ್ಯ ಅವರು ಆಗಸ್ಟ್ 1 ರಿಂದ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಿದ್ದಾರೆ.
ಪರಿಷತ್ ಕಲಾಪದಲ್ಲಿ ‘ನಿತ್ಯ ಸುಮಂಗಲಿ’ ಪದ ಗದ್ದಲ
ಬೆಂಗಳೂರು: ವಿಧಾನ ಮಂಡಲ ಮುಂಗಾರು ಅಧಿವೇಶನ (Karnataka Assembly Session) ಇಂದಿನಿಂದ ಶುರುವಾಗಿದೆ. ನಿರೀಕ್ಷೆಯಂತೆ ವಾಲ್ಮೀಕಿ ನಿಗಮದ ಹಗರಣ (Valmiki Scam) ಪ್ರತಿಧ್ವನಿಸಿದೆ. ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಬಳಿಕ ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಸರ್ಕಾರದ ವಿರುದ್ಧ ಹಗರಣ ಬಗ್ಗೆ ಧ್ವನಿ ಎತ್ತಿದರೆ, ಇತ್ತ ವಿಧಾನಪರಿಷತ್ ಕಲಾಪದಲ್ಲಿ ಸಿಟಿ ರವಿ, ಹಗರಣ ಬಗ್ಗೆ ಅಬ್ಬರಿಸಿದರು.
ಸರ್ಕಾರದ ವಿರುದ್ಧ ಅಬ್ಬರಿಸುವ ಮಧ್ಯ ಸಿಟಿ ರವಿ ಅವರು ನಿತ್ಯ ಸುಮಂಗಲಿ ಪದ ಬಳಕೆ ಮಾಡಿದರು. ಈ ಬಗ್ಗೆ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ಶುರುವಾಗುತ್ತಿದ್ದಂತೆಯೇ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಉಮಾಶ್ರೀ ಮಧ್ಯ ಪ್ರವೇಶಿಸಿ, ಸುಮಂಗಲಿ ಪದ ಬಳಕೆ ಮಾಡಿದ ಸಿಟಿ ರವಿ ವಿರುದ್ಧ ಆಕ್ರೋಶ ಹೊರಹಾಕಿದರು.
ನಿನ್ನೆ(ಜುಲೈ 14) ವಕ್ಫ್ ಬೋರ್ಡ್ ನಲ್ಲಿ ಅಕ್ರಮದ ಆರೋಪ ಬಂದಿದೆ. ದಲಿತರ ಹಣ ಅಕ್ರಮವಾಗಿದೆ. ಹಿಂದುಳಿದ ವರ್ಗದ ಹಣಕೂಡಾ ಲೂಟಿ ಆಗಿದೆ. ಆಡು ಮುಟ್ಟದ ಸೊಪ್ಪಿಲ್ಲ ರೂಪದಲ್ಲಿ ಎಲ್ಲದ್ರಲ್ಲೂ ಲೂಟಿ ಹೊಡೆದಿದ್ದಾರೆ. ಸತ್ಯ ಮರೆಮಾಚಲು ಕಾಂಗ್ರೆಸ್ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ಸಿಟಿ ರವಿ ಗುಡುಗಿದರು. ಸಿಟಿ ರವಿ ಮಾತಿಗೆ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅಡ್ಡಿಪಡಿಸಿ, ಬಿಜೆಪಿ ಸರ್ಕಾರ ಹೇಗೆ ಬಂತು ಹೇಳಿ ನೋಡೋಣ ಎಂದು ವಿಶ್ವನಾಥ್ ಕಾಲೆಳೆದರು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸಿಟಿ ರವಿ, ಕೆಲವರು ನಿತ್ಯ ಸುಮಂಗಲಿಯರು ಇರುತ್ತಾರೆ. ದೀರ್ಘ ಸುಮಂಗಲಿಯರು ಇರುತ್ತಾರೆ. ಅವರು ಅಧಿಕಾರ ಇರೋ ಕಡೆ ನಿತ್ಯ ಸುಮಂಗಲಿಯರು ಹೋಗುತ್ತಾರೆ ಎಂದು ಪುಟ್ಟಣ್ಣಗೆ ಟಾಂಗ್ ಕೊಟ್ಟರು. ಪುಟ್ಟಣ ಅವರು ಮೊದಲು ಜೆಡಿಎಸ್ನಲ್ಲಿದ್ದರು. ಬಳಿಕ ಅವರು ಬಿಜೆಪಿ ಸೇರಿದ್ದು, ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪಕ್ಷಾಂತರ ಮಾಡಿದ್ದರಿಂದ ಅಧಿಕಾರ ಇರೋ ಕಡೆ ನಿತ್ಯ ಸುಮಂಗಲಿಯರು ಹೋಗುತ್ತಾರೆ ಎಂದು ಸಿಟಿ ರವಿ ಕಾಲೆಳೆದರು.
ಹೀಗೆ ನಿತ್ಯ ಸುಮಂಗಲಿಯರು, ದೀರ್ಘ ಸುಮಂಗಲಿಯರು ಎನ್ನುವ ಪದ ಬಗ್ಗೆ ಮಾತಿನ ಚರ್ಚೆ ತಾರಕಕ್ಕೇರಿದ್ದೆ ತಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಉಮಾಶ್ರೀ ಮಧ್ಯ ಪ್ರವೇಶಿಸಿದ್ದು, ಮೊದಲು ನಿತ್ಯ ಸುಮಂಗಲಿ ಪದ ಬಳಕೆ ಮಾಡಿದ್ದ ಸಿಟಿ ರವಿ ವಿರುದ್ಧ ಕಿಡಿಕಾರಿದರು. ನಿತ್ಯ ಸುಮಂಗಲಿ ಎನ್ನುವುದು ಸರಿಯಲ್ಲ. ಇದು ಸಿಟಿ ರವಿ ಅವರ ಮನಸ್ಥಿತಿ ಎಂದು ಮಾತಿನಲ್ಲೇ ತಿವಿದರು.
ಇನ್ನು ಸಿಟಿ ರವಿ ಅವರ ನಿತ್ಯ ಸುಮಂಗಲಿ ಪದ ಬಳಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಕೆಲ ಕಾಲ ವಾದ-ಪ್ರತಿವಾದದ ಗಲಾಟೆ ಆಯ್ತು. ಬಳಿಕ ಮಧ್ಯ ಪ್ರವೇಶಿಸಿದ ಉಪ ಸಭಾಪತಿ, ನಿತ್ಯ ಸುಮಂಗಲಿ ಪದ ಬಳಕೆಯನ್ನು ಕಡತದಿಂದ ತೆಗೆದು ಹಾಕಿದರು.
ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ವಿಜಯೇಂದ್ರ
ಬೆಂಗಳೂರು: ಸಾವಿರಾರು ಕೋಟಿ ರೂ. ಮೊತ್ತದ ಮುಡಾ ಹಗರಣ ಮತ್ತು ದಲಿತರ ಹಣವನ್ನು ಲೂಟಿ ಮಾಡಿದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y Vijayendra) ಅವರು ಆಗ್ರಹಿಸಿದರು.
ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಶಾಸಕರ ಭವನದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಿದರೆ ಸಾಲದು. ಸಿಎಂಗೆ ನಿಜವಾಗಿಯೂ ತಾಕತ್ತಿದ್ದರೆ ಮುಡಾ ಹಗರಣದ (MUDA scam) ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಪಾಲುದಾರರಾಗಿದ್ದಾರೆ. ಸಾವಿರಾರು ಕೋಟಿ ರೂ. ಬೆಲೆಬಾಳುವ ನಿವೇಶನಗಳಿಗೆ ಮೈಸೂರು ಮುಡಾ ಹಗರಣ ನಡೆದಿದೆ. ಈ ಹಗರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಸದನದ ಹೊರಗೆ ಹೋರಾಟ ನಡೆಸಿದ್ದೇವೆ. ಸದನದ ಒಳಗೆ ಕೂಡ ಹೋರಾಟ ಮುಂದುವರೆಯಲಿದೆ. ಅಲ್ಲದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರು (Siddaramaiah) ದಲಿತರ ಹೆಸರು ಹೇಳಿಕೊಂಡು, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದವರಿಗೆ ನ್ಯಾಯ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದವರು. ಆದರೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಲ್ಲದೆ, ಅದೇ ಮೊತ್ತದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರದ ಬಂಡವಾಳ ಈ ಮೂಲಕ ಬಯಲಾಗಿದೆ ಎಂದಿದ್ದಾರೆ.
ಯಾವ ಸರ್ಕಾರ ಇದ್ದಾಗ ಮುಡಾದಲ್ಲಿ ಹಗರಣ ನಡೆದಿದ್ದರೂ ಎಲ್ಲಾ ಸೇರಿಸಿ ಸಿಬಿಐ ತನಿಖೆಗೆ ಒಪ್ಪಿಸಿ. ಸಿಎಂ ಕುಟುಂಬವೇ ಈ ಹಗರಣದಲ್ಲಿ ಭಾಗಿಯಾಗಿದೆ. ನಿಮಗೆ ಬೇಕಾದಂತೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿದರೆ ಸಾಕಾಗುವುದಿಲ್ಲ. ಸಿಬಿಐ ತನಿಖೆಗೆ ಕೊಡಲೇಬೇಕು. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಹೆದರಿಸುವ ಕೆಲಸ ಮಾಡದ್ದೀರಿ ಎಂದು ಅವರು ಕಿಡಿಕಾರಿದ್ದಾರೆ.
ಎರಡೂ ಹಗರಣಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಅಲ್ಲಿನವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿಯೂ ದಲಿತರೇ ಆಗಿದ್ದಾರೆ. ಕಾಂಗ್ರೆಸ್ಸಿಗರಿಗೆ ದಲಿತರ ಮತ ಬೇಕು. ದಲಿತರ ನೋಟು ಕೂಡ ಬೇಕು. ದಲಿತರ ಸಾವು ಬೇಕು. ಇದು ಕಾಂಗ್ರೆಸ್ ನೀತಿ. ಈ ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ. ಅಧಿಕಾರದಲ್ಲಿ ಉಳಿಯುವ ಯೋಗ್ಯತೆ ಕಳಕೊಂಡಿದೆ. ಮಾನ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಇವತ್ತು ಯಾವ ಮುಖ ಇಟ್ಟುಕೊಂಡು ವಿಧಾನಸೌಧಕ್ಕೆ ಬರುತ್ತಾರೋ ಅರ್ಥ ಆಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.