Kantara 2 : ಜೂನ್ ನಿಂದ ಶೂಟಿಂಗ್, ಏಪ್ರಿಲ್ 2024ಕ್ಕೆ ರಿಲೀಸ್ ಎಂದ ವಿಜಯ್ ಕಿರಗಂದೂರು
ರಿಷಬ್ ಶೆಟ್ಟಿ (Rishabh Shetty) ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿ ಬಂದ ‘ಕಾಂತಾರ’ ಸಿನಿಮಾ ದೊಡ್ಡ ಗೆಲುವು ಕಂಡ ಬೆನ್ನಲ್ಲೇ ‘ಕಾಂತಾರ 2’ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಕೆಲ ದಿನಗಳ ಹಿಂದೆಯೇ ಕಾಂತಾರ 2 ಚಿತ್ರದ ಬಗ್ಗೆ ಸುದ್ದಿ ಆಗಿತ್ತು. ಆದರೆ, ಇನ್ನೂ ಆ ಕುರಿತು ಯೋಚಿಸಿಯೇ ಇಲ್ಲವೆಂದು ರಿಷಬ್ ಶೆಟ್ಟಿ ಹೇಳಿದ್ದರು. ಈ ಕುರಿತು ಅವರನ್ನು ಏನೇ ಕೇಳಿದರೂ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸುತ್ತಿದ್ದರು.
ಆದರೆ, ಈ ಕುರಿತು ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur) ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕಾಂತಾರ 2 ಸಿನಿಮಾ ಮಾಡುವ ಕುರಿತಾಗಿ ಮಾತನಾಡಿದ್ದಲ್ಲದೇ, ಸಿನಿಮಾ ಶೂಟಿಂಗ್ ಮತ್ತು ರಿಲೀಸ್ ದಿನಾಂಕವನ್ನೂ ಅವರು ಘೋಷಿಸಿ ಬಿಟ್ಟಿದ್ದಾರೆ. ಜೊತೆಗೆ ಈಗಾಗಲೇ ರಿಷಬ್ ಮತ್ತು ಟೀಮ್ ಕಥೆ ಮಾಡುವುದರಲ್ಲಿ ತೊಡಗಿದೆ ಎನ್ನುವ ವಿಷಯವನ್ನೂ ಬಹಿರಂಗ ಪಡಿಸಿದ್ದಾರೆ. ಚಿತ್ರೀಕರಣದ ಸ್ಥಳ ಹುಡುಕಲು ಕಾಡು ಮೇಡು ಅಲೆಯುತ್ತಿರುವುದಾಗಿಯೂ ತಿಳಿಸಿದ್ದಾರೆ.
ವಿಜಯ್ ಕಿರಗಂದೂರು ಅವರೇ ಹೇಳಿದಂತೆ ಈ ವರ್ಷ ಜೂನ್ ನಿಂದ ಚಿತ್ರೀಕರಣ ಶುರುವಾಗಲಿದೆ. ಏಪ್ರಿಲ್ ಅಥವಾ ಮೇ 2024ರಂದು ಕಾಂತಾರ 2 ಚಿತ್ರ ತೆರೆಗೆ ಬರಲಿದೆಯಂತೆ. ಪಕ್ಕಾ ಪ್ಲ್ಯಾನ್ ಜೊತೆಯೇ ಈ ಬಾರಿ ಚಿತ್ರೀಕರಣಕ್ಕೆ ಇಳಿಯಲಿದೆ ಚಿತ್ರತಂಡ. ಕಾಂತಾರ ಸಿನಿಮಾ ಶೂಟ್ ಮಾಡುವಾಗ ಹಲವು ತೊಂದರೆಗಳನ್ನು ಅವರು ಎದುರಿಸಬೇಕಾಯಿತು. ಹಾಗಾಗಿ ಬಜೆಟ್ ಕೂಡ ಹೆಚ್ಚಾಯಿತು. ಈ ಬಾರಿ ಎಲ್ಲ ಮುನ್ನೆಚ್ಚರಿಕೆಗಳನ್ನು ತಗೆದುಕೊಂಡು ಶೂಟಿಂಗ್ ಗೆ ಇಳಿಯುವುದಾಗಿ ನಿರ್ಮಾಪಕರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಕಾಂತಾರ 2 ಕಥೆ ಏನು, ಯಾರೆಲ್ಲ ಇರುತ್ತಾರೆ, ಯಾವ ಸ್ಥಳದಲ್ಲಿ ಶೂಟ್ ಮಾಡುತ್ತಾರೆ, ಅಚ್ಚರಿ ಎನ್ನುವಂತಹ ಕಲಾವಿದರು ಇರುತ್ತಾರಾ ಈ ಕುರಿತು ಅವರು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಆದರೆ, ಕಾಂತಾರ 2 ಸೆಟ್ಟೇರುವ ಮತ್ತು ಚಿತ್ರೀಕರಣ ಹಾಗೂ ಬಿಡುಗಡೆ ದಿನಾಂಕವನ್ನೂ ಈಗಲೇ ಘೋಷಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ ಹೊಂಬಾಳೆ ಫಿಲ್ಮ್ಸ್ ಮಾಲೀಕ ವಿಜಯ ಕಿರಗಂದೂರು.