ಕಂದನ ನೆನೆದು ಭಾವುಕ; ಮಗಳ ಜತೆಗೆ ನಾನೂ ಸತ್ತಿದ್ದೇನೆ - ವಿಜಯ್ ಅಂಟೋನಿ
ಎರಡ್ಮೂರು ದಿನಗಳ ಹಿಂದೆಯಷ್ಟೇ ಮಗಳನ್ನು ಕಳೆದುಕೊಂಡಿರುವ ನಟ ವಿಜಯ್ ಆಂಥೋನಿ ಭಾವುಕ ಪತ್ರವೊಂದನ್ನು (Letter) ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಶೇರ್ ಮಾಡಿದ್ದು, ಮಗಳನ್ನು ತಾವು ಎಷ್ಟು ಇಷ್ಟಪಡುತ್ತಿದ್ದರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಮಗಳು ಮೀರಾ ಸತ್ತ ದಿನವೇ ನಾನೂ ಕೂಡ ನನ್ನೊಳಗೆ ಸುತ್ತು ಹೋಗಿದ್ದೇನೆ ಎಂದು ಕಂಬನಿ ಮಿಡಿದಿದ್ದಾರೆ.
ನನ್ನ ಮಗಳು ಮೀರಾ ಧೈರ್ಯಶಾಲಿ, ಕರುಣಾಮಯಿ. ಹಣ, ಅಸೂಯೆ, ಜಾತಿ, ಧರ್ಮಗಳೇ ಇಲ್ಲದ ಪ್ರಶಾಂತ ಸ್ಥಳಕ್ಕೆ ಆಕೆ ಹೋಗಿದ್ದಾಳೆ. ಇನ್ನೂ ಆಕೆ ನನ್ನೊಂದಿಗೆ ಮಾತನಾಡುತ್ತಾಳೆ. ನನ್ನ ಯಾವುದೇ ಶುಭ ಕಾರ್ಯಗಳು ಇದ್ದರೂ, ಆಕೆಗೆ ಅರ್ಪಿಸುವ ಮೂಲಕ ಕೆಲಸ ಶುರು ಮಾಡುತ್ತೇನೆ. ನನ್ನ ಜೊತೆ ಆಕೆ ಯಾವತ್ತಿಗೂ ಇರುತ್ತಾಳೆ’ ಎಂದು ವಿಜಯ್ ಬರೆದುಕೊಂಡಿದ್ದಾರೆ.
ನಟ, ನಿರ್ಮಾಪಕ, ಸಂಗೀತ ನಿರ್ದೇಶಕ ವಿಜಯ್ ಆಂಟೋನಿ (Vijay Antony) ಪುತ್ರಿ ಮೀರಾ (Meera) ಮೊನ್ನೆಯಷ್ಟೇ ಬೆಳಗ್ಗೆ ಆತ್ಮಹತ್ಯೆಗೆ (Suicide) ಶರಣಾಗಿದ್ದರು. ಹನ್ನೆರಡನೇ ತರಗತಿ ಓದುತ್ತಿದ್ದ ಮೀರಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. 16ರ ವಯಸ್ಸಿನ ಮೀರಾ ಬೆಳಗ್ಗೆ ತಮ್ಮ ಮಲಗುವ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದರು.
ಬೆಳಗ್ಗೆ ಆಕೆಯ ಕೋಣೆಯ ಬಾಗಿಲು ತುಂಬಾ ಹೊತ್ತಾದರೂ ತೆರೆಯದೇ ಇರುವ ಕಾರಣಕ್ಕಾಗಿ, ಬಾಗಿಲು ತೆರೆದು ನೋಡಿದಾಗ, ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೀರಾ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲಿ ಮೀರಾ ಪ್ರಾಣಬಿಟ್ಟಿದ್ದರು.
ಶಾಲೆಯಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಿದ್ದ ಮೀರಾ, ಮಾನಸಿಕ ಖಿನ್ನತೆಗೆ ಜಾರುವುದಕ್ಕೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ವಿಜಯ್ ಆಂಟೋನಿ ಮತ್ತು ಫಾತಿಮಾ ದಂಪತಿಯ ಮೊದಲ ಮಗು ಮೀರಾ. ಈ ದಂಪತಿಗೆ ಮತ್ತೊಬ್ಬ ಮಗನಿದ್ದಾನೆ. ವಿಜಯ್ ಆಂಟೋನಿ ತಮಿಳು ಚಿತ್ರರಂಗದಲ್ಲಿ ನಟ, ಸಂಗೀತ ನಿರ್ದೇಶಕ, ನಿರ್ಮಾಪಕರಾಗಿ ಪ್ರಸಿದ್ಧಿ.