ಕಲಬುರಗಿ : ಮದುವೆ ವಿಚಾರದಲ್ಲಿ ಗಲಾಟೆ: ಬಾವಿಗೆ ಹಾರಿದ ತಂಗಿ ರಕ್ಷಿಸಲು ಹೋಗಿ ಅಣ್ಣನೂ ಮೃತ್ಯು..!
ಕಲಬುರಗಿ : ಮನೆಯಲ್ಲಿ ಮದುವೆ ವಿಚಾರದಲ್ಲಿ ನಡೆದ ಸಣ್ಣ ಜಗಳ ಅಣ್ಣ-ತಂಗಿಯ ಸಾವಿಗೆ ಕಾರಣವಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದಲಿ ಅಣ್ಣ ಮತ್ತು ತಂಗಿ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಸಂದೀಪ್ (23) ಮತ್ತು ನಂದಿನಿ (19) ಎಂಬ ಅಣ್ಣ-ತಂಗಿಯೇ ಪ್ರಾಣ ಕಳೆದುಕೊಂಡವರು. ನಂದಿನಿಯ ಮದುವೆ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆದಿತ್ತು. ಅದರಲ್ಲೂ ಮುಖ್ಯವಾಗಿ ಮನೆಯವರು ಹೇಳಿದ್ದ ಹುಡುಗನನ್ನು ಮದುವೆ ಮಾಡಿಕೊಳ್ಳುವ ವಿಚಾರದಲ್ಲಿ ನಂದಿನಿ ಆಕ್ಷೇಪ ವ್ಯಕ್ತಪಡಿಸಿದ್ದಳು.ಮಾತಿಗೆ ಮಾತು ಬೆಳೆದು ಸಿಟ್ಟುಗೊಂಡ ನಂದಿನಿ ಮನೆಯಿಂದ ಹೊರಗೆ ಓಡಿಹೋಗಿ ಬಾವಿಗೆ ಹಾರಿದ್ದಳು.
ಇದನ್ನೂ ನೋಡಿದ ಸಹೋದರ ಸಂದೀಪ್ ಆಕೆಯನ್ನು ಬೆನ್ನು ಹತ್ತಿ ಹೋಗಿದ್ದ. ಆದರೆ, ಆತನಿಗೆ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ. ಏನು ಮಾಡಬೇಕು ಎಂದು ತೋಚದೆ ಆತನೂ ಬಾವಿಗೆ ಹಾರಿದ್ದಾನೆ.ಕೊನೆಗೆ ಈಜು ಬಾರದೆ ಅಣ್ಣ ತಂಗಿಯಿಬ್ಬರೂ ಬಾವಿಯಲ್ಲಿ ಮುಳಗಿ ಸಾವು ಕಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಊರಿನವರು ಆಗಮಿಸಿ ಶವಗಳನ್ನು ಮೇಲೆತ್ತಿದ್ದಾರೆ.ಪಟಪಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿರುವ ಘಟನೆಗೆ ಸಂಬಂಧಿಸಿ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆಬ್ರವರಿ 1 ರಿಂದ ಕುಮಾರ ಪರ್ವತ ಚಾರಣ ಬಂದ್..!!
ಸುಬ್ರಹ್ಮಣ್ಯ ಜನವರಿ 30: ಅತಿಯಾದ ಚಾರಣಿಗರು ಹಾಗೂ ಬೆಸಿಗೆ ಪ್ರಾರಂಭದ ಹಿನ್ನಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣವನ್ನು ಫೆಬ್ರವರಿ 1ರಿಂದ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಜಿಲ್ಲಾದ್ಯಂತ ಬಿರುಬಿಸಿಲಿನ ವಾತಾವರಣ ಇರುವುದು ಮತ್ತು ಪರ್ವತದಲ್ಲಿ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಚಾರಣಿಗರ ಹಿತದೃಷ್ಟಿಯಿಂದ ಫೆ.1ರಿಂದ ಅಕ್ಟೋಬರ್ ತನಕ ಅಥವಾ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ವರ್ಷದ ಕುಮಾರಪರ್ವತ ಚಾರಣದ ಅವಧಿ ಮುಗಿದಿದೆ. ಅಲ್ಲದೆ ಪರ್ವತದ ಹುಲ್ಲುಗಾವಲು ಸಂಪೂರ್ಣ ಒಣಗಿರುವುದರಿಂದ ಮುಂದೆ ಬಿಸಿಲಿನ ಬೇಗೆಗೆ ಬೆಂಕಿ ಅನಾಹುತಗಳಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಆವಶ್ಯಕತೆ ಇದೆ. ಇದೀಗ ಕುಮಾರ ಪರ್ವತಕ್ಕೆ ಬರುವ ಚಾರಣಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬೇಸಗೆಯ ಕಾರಣ ನೀರಿನ ಮೂಲಗಳು ಬತ್ತಿ ಹೋಗಿವೆ. ಚಾರಣಿಗರು ತಂಗುವ ಗಿರಿಗದ್ದೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಒದಗಿಸಲು ತೊಂದರೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಜ.26ರಂದು, ಒಂದೇ ದಿನದಲ್ಲಿ 1,000ಕ್ಕೂ ಹೆಚ್ಚು ಟ್ರೆಕ್ಕಿಂಗ್ ಉತ್ಸಾಹಿಗಳು ಕುಮಾರ ಪರ್ವತಾರೋಹಣ ಮಾಡಿದ್ದರು. ಇದು ಪರಿಸರವಾದಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಮುಂದಿನ ಸಲ ಆನ್ ಲೈನ್ ಬುಕ್ಕಿಂಗ್ ಮಾಡುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.