ಕಾಫಿನಾಡು: ಇಬ್ಬರು ಅಚರ್ಕರು ಹುಲಿ ಉಗುರು ಪ್ರಕರಣದಲ್ಲಿ ಅರೆಸ್ಟ್!
ಚಿಕ್ಕಮಗಳೂರು: ಕರ್ನಾಟಕದಲ್ಲಿ ಹುಲಿ ಉಗುರಿನ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ವರ್ತೂರು ಸಂತೋಷ್ ಅರೆಸ್ಟ್ ಆದ ಬಳಿಕ ಅನೇಕ ಸೆಲೆಬ್ರಿಟಿಗಳು ಸಂಕಷ್ಟದಲ್ಲಿದ್ದಾರೆ. ಇತ್ತ ಕಾಫಿನಾಡು ಚಿಕ್ಕಮಗಳೂರಿನ ಇಬ್ಬರು ಅಚರ್ಕರು ಹುಲಿ ಉಗುರು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.
ಬಂಧಿತ ಅರ್ಚಕರನ್ನು ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಎಂದು ಗುರುತಿಸಲಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹುಲಿ ಉಗುರು ಕಾರ್ಯಚರಣೆ ಮುಂದುವರೆದಿದ್ದು, ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು ಮೂರು ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿದೆ.
ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರನ್ನು ಬಾಳೆಹೊನ್ನೂರು ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರು ಅರ್ಚಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ಅರ್ಚಕರ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಹುಲಿ ಉಗುರು ಪೆಂಡೆಂಟ್ ಧರಿಸಿದ್ದಾರೆನ್ನಲಾದ ನಟ ಜಗ್ಗೇಶ್, ದರ್ಶನ್ ತೂಗುದೀಪ, ರಾಕ್‌ಲೈನ್ ವೆಂಕಟೇಶ್ ಹಾಗೂ ನಿಖಿಲ್ ಕುಮಾರಸ್ವಾಮಿಗೂ ಸಂಕಷ್ಟ ಎದುರಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.
ಹುಲಿ ಉಗುರು ಪ್ರಕರಣ; ದರ್ಶನ್ ವಿರುದ್ಧ ದೂರು ನೀಡಿದ ಶಿವಕುಮಾರ್ಗೆ ಕೊಲೆ ಬೆದರಿಕೆ
ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಬಂಧನವಾದ ಬಳಿಕ ರಾಜ್ಯದಲ್ಲಿ ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣದ ಕುರಿತಾಗಿ ನಟ ದರ್ಶನ್ ವಿರುದ್ಧವಾಗಿ ದೂರು ನೀಡಿದ್ದ ವಂದೇ ಮಾತರಂ ಸಂಘಟನೆಯ ಮುಖಂಡ ಶಿವಕುಮಾರ್ ಕೊಲೆ ಬೆದರಿಕೆ ಬಂದಿದೆ ಎನ್ನಲಾಗಿದೆ.
ನಟ ದರ್ಶನ್ ಹುಲಿ ಉಗುರು ಮಾದರಿ ಲಾಕೆಟ್ ಧರಿಸಿದ ಆರೋಪ ಅವರ ಮೇಲಿದೆ. ದರ್ಶನ್ ವಿರುದ್ಧ ವಂದೇ ಮಾತರಂ ಸಂಘಟನೆಯ ಮುಖಂಡ ಶಿವಕುಮಾರ್ ಕ್ರಮ ಕೈ ಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರು. ಈಗ ದರ್ಶನ್ ಅಭಿಮಾನಿಗಳಿಂದ ಶಿವಕುಮಾರ್ಗೆ ಕೊಲೆ ಬೆದರಿಕೆ ಬಂದಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಯಲ್ಲಿ ಈಗಾಗಲೇ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ದರ್ಶನ್ ಅಭಿಮಾನಿಗಳಿಂದ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಿವಕುಮಾರ್ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ಗೆ ದೂರು ನೀಡಿದ್ದಾರೆ. ಆಡಿಯೋ ಮತ್ತು ವಿಡಿಯೋ ಕಾಲ್ ಮೂಲಕ ತಮಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಕ್ಟೋಬರ್ 25ರಂದು ದರ್ಶನ್ ವಿರುದ್ಧ ಅರಣ್ಯಾಧಿಕಾರಿಗೆ ದೂರು ಕೊಟ್ಟಿದ್ದೆವು. ದೂರು ನೀಡಿದ್ದಕ್ಕೆ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರ ಅಭಿಮಾನಿಗಳು ನಿನ್ನೆ ನನ್ನ ಕಾರನ್ನು ಹಿಂಬಾಲಿಸಿ ಟಚ್ ಮಾಡಿದ್ದಾರೆ. ದರ್ಶನ್ ತಪ್ಪು ಮಾಡಿಲ್ಲ ಎಂಬುದಾದರೆ ಅಭಿಮಾನಿಗಳು ಯಾಕೆ ಈ ರೀತಿ ಮಾಡುತ್ತಿದ್ದಾರೆ? ದರ್ಶನ್ ಅಭಿಮಾನಿಗಳ ಸಂಘದವರೇ ಈ ಕೆಲಸ ಮಾಡುತ್ತಿದ್ದಾರೆ. ಬೆದರಿಕೆ ಕರೆ ಹಿಂದೆ ಶೇಕಡಾ 100ರಷ್ಟು ದರ್ಶನ್ ಅವರ ಕೈವಾಡವಿದೆ’ ಎಂದು ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸದ್ಯಕ್ಕಂತೂ ರಾಜ್ಯದಲ್ಲಿ ಹುಲಿ ಉಗುರಿನ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ವರ್ತೂರು ಸಂತೋಷ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದು, ಜಾಮೀನಿಗಾಗಿ ಅವರು ಪ್ರಯತ್ನಿಸುತ್ತಿದ್ದಾರೆ.