ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಜಯಪ್ರಕಾಶ್ ಹೆಗ್ಡೆ.!
ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರಿದರು. ಕ್ಷೇತ್ರದ ಹಾಲಿ ಸಂಸದರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿಯಿಂದ ಅವರೇ ಅಭ್ಯರ್ಥಿಯೇ? ಎಂಬುದು ಸಹ ಕುತೂಹಲ.
ಮಂಗಳವಾರ ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ, ಕೆ. ಜೆ. ಜಾರ್ಜ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಶೃಂಗೇರಿ ಶಾಸಕ ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ?; ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಮಂಗಳವಾರ ಪುನಃ ಕಾಂಗ್ರೆಸ್ ಸೇರಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಬ ಸುದ್ದಿ ಇದೆ. ಮತ್ತೊಂದು ಕಡೆ ಅವರನ್ನು ಅಭ್ಯರ್ಥಿ ಮಾಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸುಧೀರ್ ಕುಮಾರ್ ಮುರೊಳ್ಳಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಒತ್ತಾಯವಿದೆ.
2009ರ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ರಚನೆಗೊಂಡಿತು. 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಯಪ್ರಕಾಶ್ ಹೆಗ್ಡೆ ಕಣಕ್ಕಿಳಿದರು. 374,423 ಮತಗಳನ್ನು ಪಡೆದು 401,441 ಮತಗಳನ್ನು ಪಡೆದ ಬಿಜೆಪಿಯ ಡಿ. ವಿ. ಸದಾನಂದ ಗೌಡ ವಿರುದ್ಧ ಸೋಲು ಕಂಡರು.
ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾದರು. 2012ರಲ್ಲಿ ಕ್ಷೇತ್ರದ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಗೆದ್ದರು. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ 399,525 ಮತಗಳನ್ನು ಪಡೆದು ಸೋತರು. ಬಿಜೆಪಿಯ ಶೋಭಾ ಕರಂದ್ಲಾಜೆ 581,168 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
2017ರಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. 2019ರ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ 718,916 ಮತಗಳನ್ನು ಪಡೆದು ಗೆದ್ದರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರು ಸಹ ಆದರು. ಎದುರಾಳಿಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 369,317 ಮತಗಳನ್ನು ಪಡೆದು ಸೋಲು ಕಂಡರು.
ಈ ನಡುವೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ನೇಮಕಗೊಂಡರು. ಜಾತಿ ಗಣತಿ ವರದಿಯನ್ನು ಫೆಬ್ರವರಿ ಅಂತ್ಯದಲ್ಲಿ ಅವರು ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ಗೆ ವಾಪಸ್ ಆಗುತ್ತಾರೆ ಎಂಬ ಸುದ್ದಿ ಕಳೆದ ವಾರದಿಂದ ಹಬ್ಬಿತ್ತು. ಇಂದು ಕೆಪಿಸಿಸಿ ಕಛೇರಿಯಲ್ಲಿ ಅವರು ಪಕ್ಷ ಸೇರಿದ್ದಾರೆ.
ಸಜ್ಜನ ರಾಜಕಾರಣಿ ಎಂದೇ ಜಯಪ್ರಕಾಶ್ ಹೆಗ್ಡೆ ಖ್ಯಾತಿಗಳಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ಹೆಸರಿದೆ. ಆದರೆ ಕಾಂಗ್ರೆಸ್‌ನಲ್ಲಿ ‘ಗೋ ಬ್ಯಾಕ್ ಹೆಗ್ಡೆ’ ಎಂಬ ಅಭಿಯಾನವೂ ನಡೆದಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಕ್ಷೇತ್ರ ಗೆದ್ದಿರುವ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಗೆಲ್ಲುವ ಉತ್ಸಾಹದಲ್ಲಿದೆ. ಆದ್ದರಿಂದ ಕೆ. ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿ ಎಂಬ ಸುದ್ದಿಗಳು ಬಲವಾಗಿ ಹಬ್ಬಿವೆ.
ಈ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿ ‘ಗೋ ಬ್ಯಾಕ್ ಶೋಭಾ’ ಎಂದು ನಡೆಯುತ್ತಿರುವ ಅಭಿಯಾನದ ಮಾದರಿಯಲ್ಲಿ ಕಾಂಗ್ರೆಸ್‌ನಲ್ಲಿ ‘ಗೋ ಬ್ಯಾಕ್ ಹೆಗ್ಡೆ’ ಎಂಬ ಅಭಿಯಾನ ನಡೆದಿದೆ. ಈಗಾಗಲೇ ಕರ್ನಾಟಕ ಕಾಂಗ್ರೆಸ್ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.