ಕುತೂಹಳ ಮೂಡಿಸಿದ ಜಗದೀಶ್ ಶೆಟ್ಟರ್ ನಡೆ; ಕಾಂಗ್ರೆಸ್ಸಿನಿಂದ ಘರ್ ವಾಪ್ಸಿ ಆಗಿ ಮುಖಭಂಗ!!?
ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಪ್ರಕಟಿಸಿದ್ದು, ರಾಜ್ಯದ 20 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದಲ್ಲೇ ಭಿನ್ನಮತ, ಅಸಮಾಧಾನದ ಹೊಗೆಯಾಡುತ್ತಿದೆ. ಇದರ ಜೊತೆಗೆ ಕೆಲ ರಾಜಕೀಯ ನಾಯಕರ ವೃತ್ತಿಜೀವನ ಅಂತ್ಯವಾಗುವ ಲಕ್ಷಣಗಳಿವೆ. ಅದರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಒಬ್ಬರು.
ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ ಲೋಕಸಭೆ ಟಿಕೆಟ್ ವಿಚಾರವಾಗಿ ಬಿಜೆಪಿಯೊಳಗೆ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಇತ್ತ ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸೇರಿ ಐದಾರು ತಿಂಗಳ ನಂತರ ಮರಳಿ ಬಿಜೆಪಿ ಗೂಡು ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಥಿತಿ ಕೂಡ ಅತಂತ್ರಗೊಂಡಿದೆ. ಧಾರವಾಡ ಅಥವಾ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್‌ಗೆ ನಿರೀಕ್ಷಿಸಲಾಗದ ಶಾಕ್ ಬಂದಪ್ಪಳಿಸಿದೆ.
ಜಗದೀಶ್ ಶೆಟ್ಟರ್ ಅವರಿಗೆ ಈಗ ಇರುವುದು ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲಿನ ಭರವಸೆ ಮಾತ್ರ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಅದು ಸಿಗುವುದು ಅಸಂಭವ ಎನಿಸುತ್ತಿದೆ. ಬಿಜೆಪಿಯ ಮೂಲಗಳ ಪ್ರಕಾರ, ಜಗದೀಶ್ ಶೆಟ್ಟರ್ ಅವರನ್ನು ಲೋಕಸಭಾ ಚುನಾವಣೆಗೆ ಪರಿಗಣಿಸದಿರುವುದು ಅವರ ಚುನಾವಣಾ ರಾಜಕೀಯದ ಅಂತ್ಯವನ್ನು ಸೂಚಿಸುತ್ತದೆ ಎನ್ನುತ್ತವೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿಯ ಅಧ್ಯಕ್ಷನಾದ ನಂತರ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇದರ ಭಾಗವಾಗಿಯೇ ಬಿಜೆಪಿ ತೊರೆದಿದ್ದ ಅನೇಕ ನಾಯಕರನ್ನು ವಾಪಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ತಂತ್ರಗಾರಿಕೆಯನ್ನು ಮಾಡಿದ್ದರು. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಸಿಗದೆ ನಿರಾಶೆಗೊಂಡು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪುನಃ ಬಿಜೆಪಿ ಸೇರಿದ್ದರು.
ಮೂಲಗಳ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆ ವೇಳೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಟಿಕೆಟ್ ಕೊಡುವ ಮಾತುಕತೆಯನ್ನು ನಡೆಸಿಯೇ ಅವರು ಬಿಜೆಪಿಗೆ ಘರ್ ವಾಪ್ಸಿ ಆಗಿದ್ದರು. ಇತ್ತ ಜಗದೀಶ್ ಶೆಟ್ಟರ್ ಕೂಡ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿಯವರ ಸಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಅದಾಗದಿದ್ದರೆ ಹಾವೇರಿ ಲೋಕಸಭಾ ಕ್ಷೇತ್ರದ್ದಾದರೂ ಟಿಕೆಟ್ ನೀಡಬೇಕು ಎಂದು ಷರತ್ತು ಒಡ್ಡಿದ್ದರು. ಆರಂಭದಲ್ಲಿ ಶೆಟ್ಟರ್ ಮಾತಿಗೆ ಒಪ್ಪಿದ್ದ ಬಿಜೆಪಿ ನಾಯಕರು ಇದೀಗ ಶೆಟ್ಟರ್‌ಗೆ ಟಿಕೆಟ್ ನೀಡದೆ ಅರ್ಧ ದಾರಿಯಲ್ಲೇ ಕೈಬಿಟ್ಟಿದ್ದಾರೆ.
”ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ಪಕ್ಷ ಒಲವು ತೋರಿದ್ದರೆ ಬುಧವಾರ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ಅವರ ಹೆಸರು ಇರುತ್ತಿತ್ತು. ಆದರೆ, ಚಿಕ್ಕೋಡಿಯಿಂದ ಲಿಂಗಾಯತ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಕಣಕ್ಕಿಳಿಸಿರುವುದರಿಂದ ಬೆಳಗಾವಿಯಲ್ಲಿ ಒಬಿಸಿ ಅಥವಾ ಕುರುಬ ಸಮುದಾಯದ ಜನರೊಂದಿಗೆ ಸಂಪರ್ಕ ಹೊಂದಿರುವ ಪ್ರಬಲ ಅಭ್ಯರ್ಥಿಯನ್ನು ಬಿಜೆಪಿ ವರಿಷ್ಠರು ಹುಡುಕುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಜಿ ಮುಖ್ಯಮಂತ್ರಿಗೆ ನೋವುಂಟು ಮಾಡಬಾರದು. ಈಗಾಗಲೇ ಪಕ್ಷವು ಅವರಿಗೆ ಎಲ್ಲಾ ಸ್ಥಾನಗಳನ್ನು ಮತ್ತು ಸರ್ಕಾರವನ್ನು ನೀಡಿಎಂದು ಪಕ್ಷದ ನಾಯಕ ಮತ್ತು ಮಾಜಿ ಸಚಿವ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ ನಂತರ ಲೋಕಸಭೆ ಚುನಾವಣೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಹಾವೇರಿ ಅಥವಾ ಧಾರವಾಡದಿಂದ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಬಿಜೆಪಿಯ ಒಂದು ವರ್ಗದ ಹಿರಿಯರು ಅವರ ಜೊತೆಗೆ ನಿಂತಿದ್ದರು.