ಅರುಣ್ ಕುಮಾರ್ ಪುತ್ತಿಲ ಭೇಟಿಯಾಗಿದ್ದು ನಿಜ ; ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡ, ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿಯಾಗಿರುವುದು ನಿಜ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪುತ್ತಿಲ ನನ್ನನ್ನು ಭೇಟಿ ಮಾಡಿದ್ದು ಸತ್ಯ. ಬೆಷರತ್ ಆಗಿ ಬಿಜೆಪಿ ಸೇರ್ಪಡೆಯಾಗಿ ಎಂದು ಅವರಿಗೆ ಸೂಚಿಸಿದ್ದೇನೆ. ಯಾವುದೇ ಷರತ್ತುಗಳು ಬೇಡ. ಪ್ರಧಾನಿ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಪುತ್ತಿಲ ವಿಚಾರವಾಗಿ ದಕ್ಷಿಣ ಕನ್ನಡದ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ. ಎಲ್ಲಾ ಕ್ಷೇತ್ರಕ್ಕೂ ನಮಗೆ ಬಿಜೆಪಿ, ಕಮಲ ಚಿಹ್ನೆಯಷ್ಟೇ ಅಭ್ಯರ್ಥಿ. ಬೇರೆ ಯಾವ ಭಿನ್ನಾಭಿಪ್ರಾಯಗಳೂ ನಮ್ಮ ನಡುವೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಗೇ ಗಡುವು ನೀಡಿದ್ದ ಪುತ್ತಿಲ ಪರಿವಾರ
ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಿ ಪಕ್ಷ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದರ ಬೆನ್ನಲ್ಲೇ ಪುತ್ತೂರಿನಲ್ಲಿ ಪರಿವಾರದ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಸಿದ್ದ ಪುತ್ತಿಲ, ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದರು. ಅಲ್ಲದೆ, ಈ ವಿಚಾರವಾಗಿ 3 ದಿನಗಳ ಒಳಗಾಗಿ ನಿರ್ಧಾರ ತಿಳಿಸಬೇಕು ಎಂದೂ ಬಿಜೆಪಿಗೆ ಗಡುವು ನೀಡಿದ್ದರು. ಇದಾಗಿ ಹಲವು ದಿನಗಳೂ ಕಳೆದೂ ಈ ವಿಚಾರವಾಗಿ ಯಾವುದೇ ಬೆಳವಣಿಗೆ ಆಗಿಲ್ಲ ಎಂಬುದು ಗಮನಾರ್ಹ. ಇದೀಗ ಪುತ್ತಿಲ ಮಾತುಕತೆ ನಡೆಸಿರುವ ಬಗ್ಗೆ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.