- ರಾಜ್ಯ
- 12:27 ಅಪರಾಹ್ನ
- ನವೆಂಬರ್ 21, 2023
ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ; ಕಾಂಗ್ರೆಸ್ ಶಾಸಕನ ಸ್ಫೋಟಕ ಹೇಳಿಕೆ.!

ಬೆಳಗಾವಿ, (ನವೆಂಬರ್ 21): ಮುಖ್ಯಮಂತ್ರಿ ಸ್ಥಾನಕ್ಕೆ ಹಾಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ನಡುವೆ ಮುಸುಕಿನ ಗುದ್ದಾಟ ಮಧ್ಯೆ ಕಾಂಗ್ರೆಸ್(Congress) ಶಾಸಕರೊಬ್ಬರು ಸಚಿವ ಸತೀಶ್ ಜಾರಕಿಹೊಳಿ(Satish Jarkiholi)ಹೆಸರು ತೇಲಿಬಿಟ್ಟಿದ್ದಾರೆ. ಹೌದು…ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಶಾಸಕ ವಿಶ್ವಾಸ್ ವೈದ್ಯ ಹೊಸ ಬಾಂಬ್ ಸಿಡಿಸಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಕಂಪನ ಸೃಷ್ಟಿಸಿದೆ.
ಬೆಳಗಾವಿ (Belagavi)ಜಿಲ್ಲೆ ಯರಗಟ್ಟಿಯಲ್ಲಿ ಮಾತನಾಡಿದ ವಿಶ್ವಾಸ್ ವೈದ್ಯ, ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ. ಸತೀಶ್ ಜಾರಕಿಹೊಳಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಸಿಎಂ ಆಗಿ ನೋಡಬೇಕೆಂದು ಹೇಳುತ್ತಿದ್ದಾರೆ. ಮುಂದಿನ ದಿನದಲ್ಲಿ ಬೆಳಗಾವಿ ಗಡಿ ಭಾಗದಿಂದ ಒಬ್ಬ ಸಿಎಂ ಆಗುತ್ತಾರೆ. ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ ಸತೀಶ್ ಜಾರಕಿಹೊಳಿ ಅಣ್ಣ ಸಿಎಂ ಆಗುವುದು ಕೂಡ ಅಷ್ಟೇ ಸತ್ಯ ಎಂದರು.
ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿಶ್ವಾಸ್ ವೈದ್ಯ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಮೊದಲೇ ಕೆಲ ಕಾರಣಾಂತರಗಳಿಂದ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದು, ತಮ್ಮ ರಾಜಕೀಯ ವರಸೆ ತೋರಿಸಲು ಮುಂದಾಗಿದ್ದರು. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿ ಅಸಮಾಧಾನವನ್ನು ಶಮನ ಮಾಡಲು ಮುಂದಾಗಿದ್ದಾರೆ.
ಆದರೂ ಸತೀಶ್ ಜಾರಕಿಹೊಳಿ ಸಮಾಧಾನಗೊಂಡವರಂತೆ ಕಂಡುಬಂದಿಲ್ಲ. ಹೀಗಾಗಿ ಮೊನ್ನೇ ಅಷ್ಟೇ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ್ ಡಿಕೆ ಸುರೇಶ್ ಪತ್ರೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಬೆಳಗಾವಿ: ಸತೀಶ್ ಜಾರಕಿಹೊಳಿ vs ಅಭಯ ಪಾಟೀಲ್; ಬಿಜೆಪಿ ಶಾಸಕನ ಕಾಮಗಾರಿಯಲ್ಲಿ ಅಕ್ರಮ; ತನಿಖೆಗೆ ಆದೇಶಿಸಿದ ಪಿಡಬ್ಲೂಡಿ ಸಚಿವ
ಬೆಳಗಾವಿ ನ.20: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಬಿಜೆಪಿ ಶಾಸಕ ಅಭಯ ಪಾಟೀಲ್ (Abhay Patil) ನಡುವೆ ಬೆಳಗಾವಿ ಮಹಾನಗರ ಪಾಲಿಕೆ (Belagavi Municipal Corporation) ವಿಚಾರವಾಗಿ ಆರಂಭವಾದ ಫೈಟ್ ಮತ್ತೊಂದು ಹಂತಕ್ಕೆ ತಲುಪಿದೆ. ಶಾಸಕ ಅಭಯ್ ಪಾಟೀಲ್ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ತಿನಿಸು ಕಟ್ಟೆಯಲ್ಲಿ ಅಕ್ರಮ ನಡೆದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಇಲಾಖೆಯಿಂದಲೇ ತನಿಖೆ ಶರುಮಾಡಿಸಿದ್ದಾರೆ.
ಬಿಜೆಪಿ ಶಾಸಕ ಅಭಯ ಪಾಟೀಲ್ 2019-2020ರ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 13 ಗುಂಟೆ ಜಾಗದಲ್ಲಿ ತಿನಿಸು ಕಟ್ಟೆ ನಿರ್ಮಾಣ ಮಾಡಿಸಿದ್ದರು. ಈ ತಿನಿಸು ಕಟ್ಟೆ ಮಳಿಗೆಗಳನ್ನು ಶಾಸಕ ಅಭಯ ಪಾಟೀಲ್ ಅಕ್ರಮವಾಗಿ ತಮ್ಮ ಬೆಂಬಲಿಗರಿಗೆ ಹಂಚಿದ್ದಾರೆ ಮತ್ತು ನಾಲಾ ಮೇಲೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಸರ್ಕಾರ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಮಾಜಿ ಪಾಲಿಕೆ ಸದಸ್ಯ ದೀಪಕ ಜಮಖಂಡಿ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರು.
ಅಕ್ರಮದ ತನಿಖೆಗೆ ರಾಜ್ಯ ಲೋಕೋಪಯೋಗಿ ಇಲಾಖೆಯ 6 ಜನ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿದೆ. ಬೆಂಗಳೂರಿನ ದಕ್ಷಿಣ ಲೋಕೊಪಯೋಗಿ ಇಲಾಖೆ ಚೀಫ್ ಇಂಜಿನಿಯರ್ ದುರ್ಗಪ್ಪ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ. ಅಧಿಕಾರಿಗಳು ಎಲ್ಲಾ ಮಳಿಗೆಗಳಿಗೆ ಖುದ್ದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಒಬ್ಬರ ಹೆಸರಿನಲ್ಲಿ ಮಳಿಗೆ ಹರಾಜಾಗಿದ್ದು, ಅವರು ಮತ್ತೊಬ್ಬರಿಗೆ ಬಾಡಿಗೆಗೆ ನೀಡಿದ್ದಾರೆ. ಮಳಿಗೆಗಳಿಂದ ಸರ್ಕಾರಿ ಮೊತ್ತಕ್ಕಿಂತ ಹೆಚ್ಚು ಬಾಡಿಗೆ ಸಂಗ್ರಹಿಸಲಾಗುತ್ತಿರುವ ಆರೋಪ ಕೇಳಿಬಂದಿದೆ.
ತನಿಖೆಗೆ ಆಗಮಿಸಿದ ಅಧಿಕಾರಿಗಳ ಎದುರು ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರು ಮತ್ತು ಶಾಸಕ ಅಭಯ್ ಪಾಟೀಲ್ ಬೆಂಬಲಿಗರು ಹೈಡ್ರಾಮಾ ಸೃಷ್ಟಿಸಿದ್ದಾರೆ. ಅಧಿಕಾರಿಗಳ ತನಿಖೆ ವೇಳೆ ಉಭಯ ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿಗಳು ತನಿಖೆ ನಡೆಸುತ್ತಾರೆ ನೀವು ಯಾಕೆ ಇಲ್ಲಿ ಬಂದಿರಿ? ಎಂದು ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರಿಗೆ ಅಭಯ್ ಪಾಟೀಲ್ ಬೆಂಬಲಿಗರು ಪ್ರಶ್ನಿಸಿದ್ದಾರೆ.
ಇದರಿಂದ ಇಬ್ಬರು ನಾಯಕರ ಬೆಂಬಲಿಗರ ನಡುವೆ ಗಲಾಟೆ, ವಾಗ್ವಾದ ನಡೆಯಿತು. ಇದನ್ನು ಕಂಡ ಪೊಲೀಸರು ಇಬ್ಬರು ಬೆಂಬಲಿಗರನ್ನು ಹೊರ ಕಳುಹಿಸಿದರು. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.