ವಿವಾಹ ವಾರ್ಷಿಕೋತ್ಸವ ಸಂಧರ್ಭದಲ್ಲಿ ಮೊದಲ ಬಾರಿಗೆ ಪತ್ನಿಯ ಫೋಟೋ ರಿವೀಲ್ ಮಾಡಿದ ಇರ್ಫಾನ್...!
ಟೀಮ್ ಇಂಡಿಯಾ ಮಾಜಿ ಸ್ಟಾರ್ ಆಲ್ರೌಂಡರ್ ಇರ್ಫಾನ್ ಪಠಾಣ್ ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪತ್ನಿ ಸಫಾ ಬೇಗ್ ಜೊತೆಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಪಠಾಣ್ ಹೆಂಡತಿಗೆ ಫೋಟೋ ಶೇರ್ ಮಾಡಿಕೊಂಡಿರುವುದು ಇದೇ ಮೊದಲ ಬಾರಿ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ (Irfan Pathan) ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ. ಇದಕ್ಕೆ ಕಾರಣ ಇರ್ಫಾನ್ ಶೇರ್ ಮಾಡಿರುವ ಒಂದೇ ಒಂದು ಫೋಟೋ. ಪಠಾಣ್ ತಮ್ಮ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ತಮ್ಮ ಪತ್ನಿ ಸಫಾ ಬೇಗ್ ಜೊತೆಗಿನ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ವಿಶೇಷತೆ ಏನೆಂದರೆ, ಮೊಟ್ಟಮೊದಲ ಬಾರಿಗೆ ತನ್ನ ಪತ್ನಿಯ ಮುಖವನ್ನು ಪಠಾಣ್ ಜಗತ್ತಿಗೆ ತೋರಿಸಿದ್ದಾರೆ. ಇಲ್ಲಿಯವರೆಗೆ, ಪಠಾಣ್ ಅವರು ತಮ್ಮ ಪತ್ನಿಯೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿರಲಿಲ್ಲ.
ಸಫಾ ಬೇಗ್ ಅವರ ಮುಖ ಈವರೆಗೆ ಎಲ್ಲಿಯೂ ಕಾಣಿಸಿರಲಿಲ್ಲ. ಸಫಾ ಬುರ್ಖಾ ಧರಿಸಿರುವ, ಮುಖಕ್ಕೆ ಮಾಸ್ಕ್ ಹಾಕಿರುವ ಫೋಟೋಗಳು ಮಾತ್ರ ಈವರೆಗೆ ಕಂಡುಬಂದಿದ್ದವು. ಇದಕ್ಕಾಗಿ ಅವರು ಟೀಕೆಗೆ ಕೂಡ ಗುರಿಯಾಗಿದ್ದರು. ಆದರೀಗ ಮದುವೆ ದಿನ ಇರ್ಫಾನ್ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟು ತಮ್ಮ ಪತ್ನಿಯ ಮುಖ ಸ್ಪಷ್ಟವಾಗಿ ಕಾಣುವ ಫೋಟೋವನ್ನು ಹಂಚಿಕೊಂಡಿದ್ದಾರೆ.
”ನನ್ನ ಸಂಗಾತಿಯು ನನ್ನ ಜೀವನದಲ್ಲಿ ಮುಖ್ಯವಾದ ಪಾತ್ರಗಳನ್ನು ನಿರ್ವಹಿಸುತ್ತಾಳೆ. ನನ್ನ ಮಕ್ಕಳಿಗೆ ತಾಯಿಯಾಗಿ, ನನ್ನ ಬೆಂಬಲವಾಗಿ, ಒಡನಾಡಿಯಾಗಿ, ಸ್ನೇಹಿತೆ, ತಾಯಿಯಾಗಿ… ನೀವು ಅನೇಕ ರೀತಿಯಲ್ಲಿ ಬೆಂಬಲವನ್ನು ನೀಡುತ್ತೀರಿ. ಇದೊಂದು ಅದ್ಭುತ ಪಯಣ. ನಿನ್ನನ್ನು ಪತ್ನಿಯಾಗಿ ಪಡೆದಿದ್ದಕ್ಕೆ ನಾನು ಪುಣ್ಯವಂತ,” ಎಂದು ಎಂಟನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಹೆಂಡತಿಯ ಮೇಲೆ ಪ್ರೀತಿಯ ಹೂಮಳೆ ಸುರಿಸಿದರು.
Infinite roles mastered by one soul – mood booster, comedian, troublemaker, and the constant companion, friend, and mother of my children. In this beautiful journey, I cherish you as my wife. Happy 8th my love ❤️ pic.twitter.com/qAUW8ndFAJ
— Irfan Pathan (@IrfanPathan) February 3, 2024
ಸದ್ಯ ಇರ್ಫಾನ್ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಇರ್ಫಾನ್ ದಂಪತಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಆದರೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ತಮ್ಮ ಕುತಂತ್ರವನ್ನು ತೋರಿದ್ದಾರೆ. ಈ ಫೋಟೋಕ್ಕೆ ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೂಡಲೇ ಫೋಟೋ ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ.
ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ 2016 ರಲ್ಲಿ ವಿವಾಹವಾದರು. ಸಫಾ ಬೇಗ್ ಹೈದರಾಬಾದ್ ನಿವಾಸಿ ಮತ್ತು ಮಾಡೆಲ್ ಕೂಡ ಹೌದು. ಇಬ್ಬರೂ ಮಕ್ಕಾದಲ್ಲಿ ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇರ್ಫಾನ್ ಪಠಾಣ್ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಕಾಮೆಂಟೇಟರ್ ಆಗೊ ಕಾರ್ಯನಿರ್ವಹಿಸುತ್ತಿದ್ದಾರೆ. ಇರ್ಫಾನ್ ಪಠಾಣ್ ಭಾರತದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ವಿಶೇಷವಾಗಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ವೇಗದ ಬೌಲಿಂಗ್ನಲ್ಲಿ ಸಂಚಲನ ಮೂಡಿಸಿದ್ದರು.