ಐಪಿಎಲ್ ಬೆಟ್ಟಿಂಗ್ ಅಪಪ್ರಚಾರ ; ಧೋನಿ ವಿರುದ್ಧ ಅಪಪ್ರಚಾರ ಮಾಡಿದ್ದ ಐಪಿಎಸ್ ಅಧಿಕಾರಿಗೆ 15 ದಿನ ಜೈಲು ಶಿಕ್ಷೆ...!
2013 ರ ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ (IPL 2013 Betting Scandal) ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಡಿಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ (IPS officer Sampath Kumar) ಅವರಿಗೆ ಮದ್ರಾಸ್ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಂಗ ನಿಂದನೆ ಆರೋಪದ ಮೇಲೆ ಈ ಶಿಕ್ಷೆ ವಿಧಿಸಲಾಗಿದೆಯಾದರೂ, ನ್ಯಾಯಮೂರ್ತಿಗಳಾದ ಸುಂದರ್ ಮತ್ತು ಮೋಹನ್ ಅವರಿದ್ದ ವಿಭಾಗೀಯ ಪೀಠವು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಂಪತ್ ಕುಮಾರ್ ಅವರಿಗೆ 30 ದಿನಗಳ ಕಾಲಾವಕಾಶ ನೀಡಿರುವುದರಿಂದ ಅವರನ್ನು ತಕ್ಷಣವೇ ಜೈಲಿಗೆ ಹಾಕಲಾಗುವುದಿಲ್ಲ.
15 ದಿನಗಳ ಜೈಲು ಶಿಕ್ಷೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ, ನ್ಯಾಯಮೂರ್ತಿ ಎಸ್‌ಎಸ್ ಸುಂದರ್ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರ ಪೀಠವು ನಿವೃತ್ತ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್‌ಗೆ 15 ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತು. ಈ ಹಿಂದೆ ಧೋನಿ, ಝೀ ಮೀಡಿಯಾ, ನಿವೃತ್ತ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಮತ್ತು ಇತರರ ವಿರುದ್ಧ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರಲ್ಲಿ 2013ರ ಐಪಿಎಲ್‌ನಲ್ಲಿ ನಾನು ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದೇನೆ ಎಂದು ದುರುದ್ದೇಶಪೂರಿತ ಹೇಳಿಕೆಗಳು ಮತ್ತು ವರದಿಗಳನ್ನು ನೀಡುತ್ತಿದ್ದಾರೆ ಎಂದು ಧೋನಿ, ಈ ಮೇಲಿನವರ ಮೇಲೆ ಆರೋಪ ಹೊರಿಸಿದ್ದರು.
ಮೊಕದಮ್ಮೆ ಹೂಡಿದ್ದ ಧೋನಿ
ಹಾಗೆಯೇ ಈ ಪ್ರಕರಣದಲ್ಲಿ ಕುಮಾರ್ ಮತ್ತು ಇತರ ಆರೋಪಿಗಳು ತಮ್ಮ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡದಂತೆ ಅಥವಾ ಪ್ರಕಟಿಸದಂತೆ ತಡೆಯಬೇಕೆಂದು ಧೋನಿ ಕೋರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನಂತರ, ಝೀ ಮೀಡಿಯಾ, ನಿವೃತ್ತ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಮತ್ತು ಇತರರು, ಧೋನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಹೈಕೋರ್ಟ್ ತಡೆ ಹಿಡಿದಿತ್ತು.
ಆ ನಂತರ ಐಪಿಎಸ್ ಅಧಿಕಾರಿ ಹೊರತುಪಡಿಸಿ ಎಲ್ಲರೂ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಂಡಿದ್ದರು. ಆದರೆ ಆ ಬಳಿಕವೂ ನಿವೃತ್ತ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಲೂ ಸಹ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಧೋನಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದ್ದು, ನಿವೃತ್ತ ಐಪಿಎಸ್ ಅಧಿಕಾರಿಗೆ 15 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
MS Dhoni Jersey: ಧೋನಿಯ ನಂಬರ್-7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಮುಂದಾದ ಬಿಸಿಸಿಐ
ಭಾರತ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು 15 ಆಗಸ್ಟ್ 2020 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಧೋನಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮಾತ್ರ ಆಡುತ್ತಾರೆ. ಇದೀಗ ಧೋನಿ ನಿವೃತ್ತಿಯಾದ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕ್ರಿಕೆಟ್ ಲೋಕದಲ್ಲಿ ಧೋನಿ ಜೊತೆಗೆ ಅವರ ಜೆರ್ಸಿ ಸಂಖ್ಯೆ 7 ಕೂಡ ಅಷ್ಟೇ ಹೆಸರುವಾಸಿಯಾಗಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ.
2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಅವರ ನಾಯಕತ್ವದಲ್ಲಿ, ತಂಡವು ಮತ್ತೊಮ್ಮೆ 2014 ರಲ್ಲಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿತು. ಆದರೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. 2011ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಇದೀಗ ಈ ಶ್ರೇಷ್ಠ ನಾಯಕನ ನಂಬರ್-7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಎನ್‌ಡಿಟಿವಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಧೋನಿಯ ನಂಬರ್-7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ಮುಂದಾಗಿದೆ. ಟೀಮ್ ಇಂಡಿಯಾದಲ್ಲಿರುವಾಗ ಆಟಗಾರರು ನಂಬರ್-7 ಜರ್ಸಿಯನ್ನು ಧರಿಸುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಭಾರತದ ಮುಂದಿನ ಯಾವುದೇ ಆಟಗಾರರು ಮತ್ತು ಪ್ರಸ್ತುತ ಆಟಗಾರರು ಜೆರ್ಸಿ ನಂಬರ್-7 ಧರಿಸುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಬರೆದಿದೆ.
ಧೋನಿ ಜೆರ್ಸಿ ಹಿಂದೆ ಏಳು ಸಂಖ್ಯೆಯ ಬಳಕೆಗೆ ವಿಭಿನ್ನ ಕಥೆಗಳನ್ನು ಲಗತ್ತಿಸಲಾಗಿದೆ. ಆದರೆ, ಸ್ವತಃ ಧೋನಿ ಅವರೇ ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ”ಏಳನೇ ಸಂಖ್ಯೆಯ ಜೆರ್ಸಿಯನ್ನು ಬಳಸುವುದಕ್ಕೆ ಬೇರೆ ಯಾವುದೇ ಕಾರಣವಿಲ್ಲ, ಅದು ನನ್ನ ಜನ್ಮದಿನವಾಗಿದೆ. ಆದ್ದರಿಂದ ನಾನು ಜೆರ್ಸಿ ಸಂಖ್ಯೆ 7 ಅನ್ನು ಧರಿಸುತ್ತಾರೆ. ಯಾವ ಸಂಖ್ಯೆ ಉತ್ತಮ ಎಂದು ಚಿಂತಿಸುವ ಬದಲು ನನ್ನ ಜನ್ಮದಿನಾಂಕದ ಜೆರ್ಸಿಯನ್ನು ಧರಿಸಲು ಪ್ರಾರಂಭಿಸಿದೆ,” ಎಂದು ಧೋನಿ ಹೇಳಿದ್ದಾರೆ.
ಬಿಸಿಸಿಐ ಆಟಗಾರರೊಬ್ಬರ ಜರ್ಸಿಯನ್ನು ನಿವೃತ್ತಿಗೊಳಿಸಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದು ನಡೆದಿದೆ. ಭಾರತದ ಶ್ರೇಷ್ಠ ಬ್ಯಾಟರ್ ಸಚಿನ್ ತೆಂಡೂಲ್ಕರ್ ಜೆರ್ಸಿ ನಂಬರ್ 10 ಧರಿಸುತ್ತಿದ್ದರು. ಅವರ ಜರ್ಸಿಯನ್ನು ಕೂಡ ಬಿಸಿಸಿಐ ನಿವೃತ್ತಿಗೊಳಿಸಿದೆ. ಶಾರ್ದೂಲ್ ಠಾಕೂರ್ ಅವರು ತಮ್ಮ ವೃತ್ತಿಜೀವನದ ಆರಂಭದ ಕೆಲವು ಪಂದ್ಯಗಳಲ್ಲಿ 10 ನಂಬರ್ ಜೆರ್ಸಿಯನ್ನು ಧರಿಸಿದ್ದರು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಬಳಿಕ 10 ನಂಬರ್ ಜೆರ್ಸಿಯನ್ನು ನಿವೃತ್ತಿಗೊಳಿಸಲಾಯಿತು.