IPL 2024: ಮುಂಬೈ ತಂಡಕ್ಕೆ ಕಮ್ ಬ್ಯಾಕ್ ಮಾಡಿದ ಸೂರ್ಯ ಕುಮಾರ್; ಡೆಲ್ಲಿ ವಿರುದ್ಧ ಕಣಕ್ಕೆ.!
ಮುಂಬಯಿ: 2 ದಿನಗಳ ಹಿಂದಷ್ಟೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಿಂದ ಫಿಟ್ನೆಸ್ ಕ್ಲೀಯರೆನ್ಸ್ ಸರ್ಟಿಫಿಕೇಟ್ ಪಡೆದು ಐಪಿಎಲ್(IPL 2024) ಆಡಲು ಅನುಮತಿ ಪಡೆದಿದ್ದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್(Suryakumar Yadav) ಮುಂಬೈ(mumbai indians) ತಂಡವನ್ನು ಸೇರಿದ್ದಾರೆ. ಸೂರ್ಯಕುಮಾರ್ ಅವರು ಮುಂಬೈ ತಲುಪಿದ ಫೋಟೊ ಟ್ವಿಟರ್ ಎಕ್ಸ್ನಲ್ಲಿ ವೈರಲ್ ಆಗಿದೆ.
ಮುಂಬೈ ತಲುಪಿರುವ ಸೂರ್ಯಕುಮಾರ್ ಅವರು ಇಂದಿನಿಂದಲೇ ತಂಡದೊಂದಿಗೆ ಅಭ್ಯಾಸ ಆರಂಭಿಸಲಿದ್ದು ಏಪ್ರಿಲ್ 7ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಸೂರ್ಯ ಆಗಮನದಿಂದ ಮುಂಬೈ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಹ್ಯಾಟ್ರಿಕ್ ಸೋಲಿಗೆ ತುತ್ತಾಗಿರುವ ಮುಂಬೈ ಇನ್ನಾದರೂ ಸೋಲಿನ ಸುಳಿಯಿಂದ ಹೊರಬರಳಿದೆಯಾ ಎಂದು ಕಾದು ನೋಡಬೇಕಿದೆ.
Our Surya Is Back 😍💕
— . (@onlySKYmatters) April 4, 2024
Can't wait to see you on field 🥹💃🏻🧿#SuryakumarYadav pic.twitter.com/XR9sAYrbUv
ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಎಡ ಪಾದದ ನೋವಿಗೆ ಸಿಲುಕಿದ್ದರು. ಬಳಿಕ ಜನವರಿಯಲ್ಲಿ ಸೂರ್ಯ ನ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಕೆ ಕಂಡು ಐಪಿಎಲ್ ಆಡಲು ಸಜ್ಜಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಆಗಮನದಿಂದ ಮಧ್ಯಮ ಕ್ರಮಾಂಕ್ಕಕ್ಕೆ ಬಲ ಬಂದಂತಾಗಿದೆ. ಈ ಹಿಂದಿನ ಮೂರು ಪಂದ್ಯಗಳ ಸೋಲಿಗೂ ಕೂಡ ಮಧ್ಯಮ ಕ್ರಮಾಂಕದ ವೈಫಲ್ಯತೆ ಕಾರಣವಾಗಿತ್ತು. ಇದೀಗ ಸೂರ್ಯ ಎಂಟ್ರಿಯಿಂದ ಈ ಸಮಸ್ಯೆ ಬಗೆಹರಿದಂತಿದೆ.
ನಟರಾಜ ಶೈಲಿಯಲ್ಲಿ ಬ್ಯಾಟ್ ಬೀಸುವ ಇವರು ಹಲವು ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಸ್ಮರಣೀಯ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಈ ವರೆಗೂ 60 ಟಿ20 ಪಂದ್ಯಗಳನ್ನಾಡಿದ್ದು, 171+ ಸ್ಟ್ರೈಕ್ರೇಟ್ನೊಂದಿಗೆ 2141 ರನ್ ಕಲೆಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರು 4 ಶತಕಗಳನ್ನೂ ಬಾರಿಸಿದ್ದಾರೆ. ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿಯೂ ಸೂರ್ಯ ನಂ.1 ಸ್ಥಾನ ಪಡೆದಿದ್ದಾರೆ.
ಐಪಿಎಲ್ ಸಾಧನೆ
ಸೂರ್ಯಕುಮಾರ್ ಯಾದವ್ ಅವರು ಈ ವರೆಗೆ ಐಪಿಎಲ್ನಲ್ಲಿ 2 ಫ್ರಾಂಚೈಸಿಗಳನ್ನು ಪ್ರತಿನಿಧಿಸಿ ಒಟ್ಟು 139 ಪಂದ್ಯಗಳನ್ನು ಆಡಿದ್ದಾರೆ. 124 ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿರುವ ಇವರು 3249 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಮತ್ತ 21 ಅರ್ಧಶತಕ ಒಳಗೊಂಡಿದೆ. ಮುಂಬೈಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೂರ್ಯ ಅವರ ದಾಖಲೆ ಉತ್ತಮವಾಗಿದೆ. ಹೀಗಾಗಿ ಅವರು ಡೆಲ್ಲಿ ವಿರುದ್ಧ ಕಣಕ್ಕಿಳಿದರೆ ಪಂದ್ಯದಲ್ಲಿ ಅಬ್ಬರಿಸುವುದು ಖಚಿತ ಎನ್ನಲಡ್ಡಿಯಿಲ್ಲ.
ಮುಂಬೈ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್