IPL 2023: ರಾಜಸ್ಥಾನ ವಿರುದ್ಧ ಪಂಜಾಬ್ ಗೆ 5 ರನ್‌ಗಳ ವಿರೋಚಿತ ಗೆಲುವು!
ಗುವ್ಹಾಟಿ(ಏ.05): ಶಿಮ್ರೊನ್ ಹೆಟ್ಮೆಯರ್ ಹಾಗೂ ಧ್ರುವ್ ಜುರೆಲ್ ಹೋರಾಟಕ್ಕೆ ಪಂಜಾಬ್ ಕಿಂಗ್ಸ್ ಬೆಚ್ಚಿ ಬಿದ್ದಿತ್ತು. 198 ರನ್ ಬೃಹತ್ ಟಾರ್ಗೆಟ್ ನೀಡಿದ್ದರೂ ಒಂದು ಹಂತದಲ್ಲಿ ರಾಜಸ್ಥಾನಕ್ಕೆ ಚೇಸಿಂಗ್ ಅಸಾಧ್ಯ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಹೆಟ್ಮೆಯರ್ ಹಾಗೂ ಧ್ರುವ್ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡುವ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪೈಪೋಟಿಗೆ ಬಿದ್ದು ಬೌಂಡರಿ ಸಿಕ್ಸರ್ ಸಿಡಿಸಿದರು. ಅಂತಿಮ ಓವರ್‌ನಲ್ಲಿ ರಾಜಸ್ಥಾನ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಆದರೆ ಹೆಟ್ಮೆಯರ್ ವಿಕೆಟ್ ಪತನಗೊಂಡಿತು. ಇತ್ತ ಧ್ರುವ್ ಅಂತಿಮ ಎಸೆತಗಳಲ್ಲಿ ನಿರೀಕ್ಷಿತ ರನ್ ಸಿಡಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಪಂಜಾಬ್ ಕಿಂಗ್ಸ್ 5 ರನ್ ಗೆಲುವು ದಾಖಲಿಸಿತು.
198 ರನ್ ಬೃಹತ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಕೆಲ ಬದಲಾವಣೆಯೊಂದಿಗೆ ಬ್ಯಾಟಿಂಗ್ ಆರಂಭಿಸಿತು. ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕನಾಗಿ ಆರ್ ಅಶ್ವಿನ್ ಅಖಾಡಕ್ಕೆ ಇಳಿದಿದ್ದರು. ಆದರೆ ರಾಜಸ್ಥಾನ ರಾಯಲ್ಸ್ ತಂಡದ ಪ್ಲಾನ್ ವರ್ಕೌಟ್ ಆಗಲಿಲ್ಲ. ಕಾರಣ ರಾಜಸ್ಥಾನ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಯಶಸ್ವಿ ಜೈಸ್ವಾಲ್ 11 ರನ್ ಸಿಡಿಸಿ ಔಟಾದರೆ, ಅಶ್ವಿನ್ ಡಕೌಟ್ ಆದರು. 26 ರನ್ ಗಳಿಸುವಷ್ಟರಲ್ಲೇ ರಾಯಲ್ಸ್ 2 ವಿಕೆಟ್ ಕಳೆದುಕೊಂಡಿತು.
ದೇವದತ್ ಪಡಿಕ್ಕಲ್ ಹಾಗೂ ರಿಯಾನ ಪರಾಗ್ ಹೋರಾಟದ ಸೂಚನೆ ನೀಡಿದರು. ಆದರೆ ಪರಾಗ್ 20 ರನ್ ಸಿಡಿಸಿ ನಿರ್ಗಮಿಸಿದರೆ, ಪಡಿಕ್ಕಲ್ 21 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಶಿಮ್ರೊನ್ ಹೆಟ್ಮೆಯರ್ ಹಾಗೂ ಧ್ರುವ್ ಜುರೆಲ್ ಜೊತೆಯಾಟ ರಾಯಲ್ಸ್ ತಂಡಕ್ಕೆ ಹೊಸ ಚೈತನ್ಯ ಮೂಡಿಸಿತು. ಹೆಟ್ಮೆಯರ್ ಬೌಂಡರಿ ಸಿಕ್ಸರ್ ಆಟಕ್ಕೆ ಪಂಜಾಬ್ ಲೆಕ್ಕಾಚಾರ ಉಲ್ಟಾ ಹೊಡೆಯಲು ಆರಂಭಿಸಿತು. ಇತ್ತ ಧ್ರುವ್ ಜುರೆಲ್ ಕೂಡ ಉತ್ತಮ ಸಾಥ್ ನೀಡಿದರು. 19ನೇ ಓವರ್‌ನಲ್ಲಿ ಧ್ರುವ್ ಸಿಕ್ಸರ್ ಸಿಡಿಸಿ ಚೇಸಿಂಗ್ ಮತ್ತಷ್ಟು ರೋಚಕವಾಗಿಸಿದರು.
ಅಂತಿಮ 6 ಎಸೆತದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಆದರೆ ಹೆಟ್ಮೆಯರ್ 18 ಎಸೆತದಲ್ಲಿ 36 ರನ್ ಸಿಡಿಸಿ ಔಟಾದರು. ಇತ್ತ ಧ್ರುವ್ ಒಂದು ಬೌಂಡರಿ ಸಿಡಿಸಲು ಮಾತ್ರ ಸಾಧ್ಯವಾಯಿತು. ಹೀಗಾಗಿ ರಾಜಸ್ಥಾನ 7 ವಿಕೆಟ್ ಕಳೆದುಕೊಂಡು 192 ರನ್ ಸಿಡಿಸಿತು. ಇಷ್ಟೇ ಅಲ್ಲ ಕೇವಲ 5 ರನ್ ಸೋಲು ಕಂಡಿತು. ಧ್ರುವ್ 15 ಎಸೆತದಲ್ಲಿ ಅಜೇಯ 32 ರನ್ ಸಿಡಿಸಿದರು.
ಪಂಜಾಬ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕ ಶಿಖರ್ ಧವನ್ ಹಾಗೂ ಪ್ರಭಾಸಿಮ್ರನ್ ಸಿಂಗ್ ಆರಂಭಕ್ಕೆ ರಾಯಲ್ಸ್ ಸುಸ್ತಾಗಿತ್ತು. ಪ್ರಭಾಸಿಮ್ರನ್ 60 ರನ್ ಕಾಣಿಕೆ ನೀಡಿದ್ದರು. ಇತ್ತ ನಾಯಕ ಧವನ್ 56 ಎಸೆತದಲ್ಲಿ ಅಜೇಯ 86 ರನ್ ಸಿಡಿಸಿದರು. ಜಿತೇಶ್ ಶರ್ಮಾ 27 ರನ್ ಕಾಣಿಕೆ ನೀಡಿದರು. ಇತರರಿಂದ ಉತ್ತಮ ರನ್ ಹರಿದು ಬರಲಿಲ್ಲ. ಈ ಮೂಲಕ ಪಂಜಾಬ್ 4 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿತು.
ಇನ್ನು ಟೂರ್ನಿಯಲ್ಲಿ ಪಂಜಾಬ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ.