ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕು; ಬೆಂಗಳೂರಿನ 4ಕ್ಕೂ ಹೆಚ್ಚು ಕಡೆ ಸಿಐಡಿಯ ಎಸ್ಐಟಿ ತಂಡ ದಾಳಿ!
ಎಸ್ಐಟಿ ತಂಡ ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು ಬೆಂಗಳೂರಿನ 4ಕ್ಕೂ ಹೆಚ್ಚು ಕಡೆ ಸಿಐಡಿಯ ಎಸ್ಐಟಿ ತಂಡ ದಾಳಿ ನಡೆಸಿದೆ. ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿದ್ದ್ ಸೇರಿ ಪ್ರಮುಖ ಮೂರು ಆರೋಪಿಗಳ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ. ಕೋರ್ಟ್ನಿಂದ ಸರ್ಚ್ ವಾರಂಟ್ ಪಡೆದು ಸಿಐಡಿ ತಂಡ ಪರಿಶೀಲನೆ ನಡೆಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್ ಕಾಯಿನ್ ಪ್ರಕರಣದ(Bitcoin Case) ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಮೂರು ಆರೋಪಿಗಳ ಮನೆ ಮೇಲೆ ದಾಳಿ ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ನಿಂದ ನಿನ್ನೆ(ಸೆಪ್ಟೆಂಬರ್ 11) ಸರ್ಚ್ ವಾರಂಟ್ ಪಡೆದುಕೊಂಡು ಇಂದು (ಸೆಪ್ಟೆಂಬರ್ 12) ಬೆಳ್ಳಂಬೆಳಗ್ಗೆ ಪ್ರಮುಖ ಆರೋಪಿಗಳಾದ ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿದ್ದ್ ಮನೆಗಳ ಮೇಲೆ ಎಸ್ಐಟಿ ಅಧಿಕಾರಿಗಳು ಮಾಡಿದ್ದಾರೆ. ಸದಾಶಿವನಗರದಲ್ಲಿರುವ ಸುನೀಶ್ ಹೆಗ್ಡೆ, ಪ್ರಸಿದ್ದ್ ಹಾಗೂ ಜಯನಗರದಲ್ಲಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೇಳಿಬಂದ ಬಿಟ್ ಕಾಯಿನ್ ಹಗರಣ (Bitcoin scandal) ಮತ್ತೆ ಸದ್ದು ಮಾಡುತ್ತಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ದಾಖಲಿಸಿದ ಬಳಿಕ ರಾಜ್ಯ ಸರ್ಕಾರ ಮರು ತನಿಖೆಗೆ ಆದೇಶಸಿದ್ದು, ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಕರ್ಬಿಕರ್ ನೇತೃತ್ವದಲ್ಲಿ SIT ತಂಡ ರಚಿಸಿದೆ. ಆದರೆ ಇದರ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ.
ಇಸ್ರೇಲ್ ದೇಶದ ಸಹಾಯ ಪಡೆಯಲು ಹಂತ-ಹಂತ ಪ್ರಕ್ರಿಯೆ ಪಾಲಿಸಬೇಕಿದೆ. ಅಲ್ಲದೇ ಕ್ರಿಪ್ಟೋ ಕರೆನ್ಸಿ ವಾಲೇಟ್ಗಳನ್ನ ಫ್ರೀಜ್ ಮಾಡುವಷ್ಟು ಟೆಕ್ನಾಲಜಿ ನಮ್ಮಲ್ಲಿ ಇನ್ನೂ ಅಷ್ಟಾಗಿ ಬೆಳೆದಿಲ್ಲ. ಹೀಗಾಗಿ ಬಿಟ್ ಕಾಯಿನ್ ಹಗರಣದ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ರಾಜ್ಯ ಸಿಐಡಿ SIT ತಂಡ ಇದಕ್ಕಾಗಿ ಇಸ್ರೇಲ್ ಬಳಿ ಸಹಾಯ ಕೇಳುವ ಸಾಧ್ಯತೆ ಇದ್ದು, ಅದರಕ್ಕೂ ಮೊದಲು ಪ್ರಾಥಮಿಕವಾಗಿ ಪ್ರಮುಖ ಆರೋಪಿಗಳ ಜನ್ಮಜಾಲಾಡುತ್ತಿದ್ದಾರೆ.