ರೈಲು ಹಳಿಗಳಲ್ಲಿ ಹೆಣಗಳ ರಾಶಿ, ಗಾಯಾಳುಗಳಿಂದ ತುಂಬಿದ ಆಸ್ಪತ್ರೆ ; ಊರಿನಲ್ಲಿ ತಮ್ಮವರಿಗಾಗಿ ಕಾಯುತ್ತಿರುವ ಕುಟುಂಬ- ರೈಲು ದುರಂತಕ್ಕೆ ಇಡೀ ಭಾರತವೇ ಸ್ಥಬ್ಧ...!
ಭುವನೇಶ್ವರ್: ಕೋರಮಂಡಲ್ ಎಕ್ಸ್ಪ್ರೆಸ್, ಬೆಂಗಳೂರು–ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 233 ಮಂದಿ ಮೃತಪಟ್ಟು, ಸುಮಾರು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಪಘಾತದ ಸ್ಥಳದಿಂದ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗಳಿಗೆ ಸಾಗಿಸಲು 115 ಆಂಬ್ಯುಲೆನ್ಸ್ಗಳು ಮತ್ತು 50 ಬಸ್ಗಳು ಹರಸಾಹಸ ಪಟ್ಟವು. ಗಾಯಾಳುಗಳಿಂದ ಆಸ್ಪತ್ರೆ ತುಂಬಿ ತುಳುಕುತ್ತಿರವ ಕಾರಣ ಬಾಲಸೋರ್ನ ಜಿಲ್ಲಾ ಕೇಂದ್ರ ಆಸ್ಪತ್ರೆಯ ಹೊರಗೆ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯ ಗಾಯಾಳುಗಳನ್ನು ಭದ್ರಕ್ ಜಿಲ್ಲೆಗೆ ರವಾನಿಸಲಾಗಿದೆ.
ಕಾರ್ಯಾಚರಣೆಗಾಗಿ ಸುಮಾರು 600-700 ಸಿಬ್ಬಂದಿಯನ್ನು ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತಗಳು ನಿಯೋಜಿಸಿವೆ. ಆದಾಗ್ಯೂ, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ರಕ್ಷಣಾ ತಂಡಗಳಿಗೆ ಅಗತ್ಯವಿರುವ ಆಂಬ್ಯುಲೆನ್ಸ್ಗಳು ಕೊರತೆ ಕಂಡು ಬಂತು, ಸಹಾಯಕ್ಕಾಗಿ ಬಸ್ಗಳು ಮತ್ತು ಇತರ ವಾಹನಗಳನ್ನು ಕಳುಹಿಸಲು ಸರ್ಕಾರ ನಿರ್ಧರಿಸಿದೆ.
50 ಆ್ಯಂಬುಲೆನ್ಸ್ ಗಳಿದ್ದರೂ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸಾಕಾಗಲಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯ ಬಸ್ಗಳನ್ನು ಸಜ್ಜುಗೊಳಿಸಲಾಗುತ್ತಿದೆ ”ಎಂದು ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಟ್ವೀಟ್ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ, ಹಲವಾರು ಪ್ರಯಾಣಿಕರಿಗೆ ಚಿಕಿತ್ಸೆಯ ಅಗತ್ಯವಿರುವುದರಿಂದ ರಕ್ತದ ಕೊರತೆ ಕಂಡುಬಂದಿದೆ.
ಭೀಕರ ದುರಂತದಲ್ಲಿ ಸುಮಾರು 233 ಮಂದಿ ಸಾವನ್ನಪ್ಪಿರುವುದರಿಂದ ರೈಲು ಹಳಿಗಳ ಮೇಲೆ ಹೆಣಗಳ ರಾಶಿಯೇ ಬಿದ್ದಿದೆ. ರೈಲ್ವೆ ಬೋಗಿಗಳು ಒಂದರ ಮೇಲೆ ಒಂದು ಬಿದ್ದಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕ್ಲಿಷ್ಟಕರವಾಗಿದೆ. ಭಾರ ಎತ್ತುವ ಸಲುವಾಗಿ ಕ್ರೇನ್ಗಳನ್ನು ತರಿಸಲಾಗಿದೆ. ಕತ್ತಲಾಗಿರುವ ಕಾರಣ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ತಿಳಿದು ಬಂದಿದೆ