ಸ್ವಾತಂತ್ರ್ಯ ದಿನಾಚರಣೆ ವೇಳೆ ವೇದಿಕೆ ಮೇಲೆಯೇ ಕುಸಿದು ಬಿದ್ದ ಸಚಿವ..

ಭೂಪಾಲ್: ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ವೇಳೆಯ ಆರೋಗ್ಯ ಸಚಿವರೊಬ್ಬರು ವೇದಿಕೆಯ ಮೇಲೆ ಕುಸಿದು ಬಿದ್ದಿರುವ ಘಟನೆ ಮಧ್ಯಪ್ರದೇಶದ ಭೂಪಾಲ್ ಬಳಿಯ ರೈಸನ್ನಲ್ಲಿ ನಡೆದಿದೆ.
ರೈಸನ್ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಪ್ರಭು ರಾಮ್ ಚೌಧರಿ ಪರೇಡ್‌ನಲ್ಲಿ ಭಾಗವಹಿಸಿದ ನಂತರ ತಮ್ಮ ಭಾಷಣವನ್ನು ಮುಗಿಸಿದರು. ಇದಾದ ನಂತರ ಇದ್ದಕ್ಕಿದ್ದಂತೆ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ವೇದಿಕೆಯಲ್ಲೇ ತಲೆ ಸುತ್ತಿ ಬಿದ್ದಿದ್ದಾರೆ. ಇದರಿಂದ ಸ್ಥಳದಲ್ಲಿ ಕೋಲಾಹಲ ಉಂಟಾಗಿದ್ದು, ಶೀಘ್ರದಲ್ಲೇ ಜಿಲ್ಲಾಧಿಕಾರಿ ಮತ್ತು ಎಸ್ಪಿ ನೇತೃತ್ವದಲ್ಲಿ ಸಚಿವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ರೈಸನ್ ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಅನಿಲ್ ಓಧ್ ಮಾತನಾಡಿ, ಸಚಿವರು ಬಹಳ ಹೊತ್ತು ನಿಂತಿದ್ದರು. ಇದರಿಂದಾಗಿ ಹೃದಯಕ್ಕೆ ರಕ್ತ ಕಡಿಮೆಯಾದ ಕಾರಣ ತಲೆತಿರುಗುವಿಕೆ ಸಂಭವಿಸಿದೆ. ಅವರ ಬಿಪಿ ಮತ್ತು ಶುಗರ್ ತಪಾಸಣೆ ಮಾಡಲಾಗಿದ್ದು, ಅದು ನಾರ್ಮಲ್ ಆಗಿತ್ತು. ಈಗ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಪ್ರೋಟೋಕಾಲ್ ವಿಚಾರವಾಗಿ ಕೆಂಪುಕೋಟೆಯ ಕಾರ್ಯಕ್ರಮದಿಂದ ದೂರ ಉಳಿದ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನುದ್ಧೇಶಿಸಿ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರುಹಾಜರಾಗಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.
ತಾವು ಗೈರುಹಾಜರಾಗಿರುವ ಕುರಿತು ಸ್ಪಷ್ಟನೆ ನೀಡಿದ ಖರ್ಗೆ ಕಣ್ಣಿನ ಸಂಬಂಧಿತ ಸಮಸ್ಯೆ ಹಾಗೂ ಭದ್ರತೆಯ ಕಾರಣದಿಂದಾಗಿ ತಾವು ಕಾರ್ಯಕ್ರಮ ತಪ್ಪಿಸಿಕೊಂಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಈ ಕುರಿತು ಮಾತನಾಡಿದ ಖರ್ಗೆ ಮೊದಲನೆಯದಾಗಿ ನನಗೆ ಸ್ವಲ್ಪ ಕಣ್ಣಿನ ಸಮಸ್ಯೆಗಳಿವೆ. ಎರಡನೇಯದಾಗಿ ಶಿಷ್ಟಾಚಾರದ ಪ್ರಕಾರ 9:20ಕ್ಕೆ ನಾನು ನನ್ನ ನಿವಾಸದಲ್ಲಿ ಧ್ವಜಾರೋಹಣ ಮಾಡಿದ ನಂತರ ಕಾಂಗ್ರೆಸ್ ಕಚೇರಿಗೆ ತೆರಳಬೇಕಿತ್ತು.
ಕೆಂಪುಕೋಟೆಯಲ್ಲಿನ ಭದ್ರತೆಯ ಕಾರಣದಿಂದಾಗಿ ನಾನು ಇಂದು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಪ್ರಧಾನಿ ಭಾಷಣ ಮುಗಿದು ಅವರು ನಿರ್ಗಮಿಸಿದ ಬಳಿಕ ಬೇರೆಯವರನ್ನು ಹೊರಬಿಡುತ್ತಾರೆ. ಆಗಾಗಿ ನಾನು ಸಮಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ ಎಂಬ ಕಾರಣಕ್ಕೆ ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.