IND vs ZIM: ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ, 100 ರನ್‌ಗಳಿಂದ ಗೆದ್ದ ಭಾರತ
IND vs ZIM: ಜಿಂಬಾಬ್ವೆ (Zimbabwe) ವಿರುದ್ಧ ಇಂದು ನಡೆದ ಎರಡನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ (India), ಆತಿಥೇಯ ತಂಡವನ್ನು 100 ರನ್‌ಗಳಿಂದ ಮಣಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ ಆರಂಭದಿಂದಲೇ ಪೆವಿಲಿಯನ್ ಪರೇಡ್ ಆರಂಭಿಸಿ 18.4 ಓವರ್‌ಗಳಲ್ಲಿ 134 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ ಈ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿ 100 ರನ್ ಗಳ ಭರ್ಜರಿ ಜಯ ಸಾಧಿಸಿತು.
ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ:
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ವಾಸ್ತವವಾಗಿ ಸರಣಿಯ ಮೊದಲ ಪಂದ್ಯದಲ್ಲಿ 4 ಎಸೆತಗಳನ್ನು ಎದುರಿಸಿ ಯಾವುದೇ ರನ್ ಕಲೆಹಾಕದೆ ಅಂದರೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದ ಅಭಿಷೇಕ್ ಶರ್ಮಾ, ಎರಡನೇ ಟಿ20 ಪಂದ್ಯದಲ್ಲಿ ಅಕ್ಷರಶಃ ರೌದ್ರಾವತಾರ ತಾಳಿದ್ದಾರೆ. ಈ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಖಾತೆ ತೆರೆದಿದ್ದ ಅಭಿಷೇಕ್ ಶರ್ಮಾ, ಸತತ ಮೂರು ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕ ಪೂರೈಸಿದರು
ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ (Shubman Gill) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಭಾರತದ ಬ್ಯಾಟ್ಸ್‌ಮನ್‌ಗಳು ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿದರು. ನಾಯಕ ಶುಭ್‌ಮನ್ ಗಿಲ್ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಇದು ಭಾರತದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲಿಲ್ಲ. ಅಭಿಷೇಕ್ ಶರ್ಮಾ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು. ಅವರು 47 ಎಸೆತಗಳಲ್ಲಿ 100 ರನ್ ಗಳಿಸಿದರು. ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವಾಗಿದ್ದು, ಈ ಸಿಡಿಲಬ್ಬರದ ಬ್ಯಾಟಿಂಗ್ನಲ್ಲಿ ಅವರು 7 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಸಹ ಬಾರಿಸಿದರು.
ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ( Ruturaj Gaikwad) ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 47 ಎಸೆತಗಳಲ್ಲಿ 77 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿದ್ದವು. ಅದೇ ವೇಳೆಗೆ ಕಳೆದ ಪಂದ್ಯದಲ್ಲಿ ಖಾತೆ ತೆರೆಯದೇ ಔಟಾಗಿದ್ದ ರಿಂಕು ಸಿಂಗ್ (Rinku Singh) ಕೂಡ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರು 22 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ಅಜೇಯ 48 ರನ್ ಬಾರಿಸಿದರು.
ಎಂದಿನಂತೆ ಈ ಪಂದ್ಯದಲ್ಲೂ ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದರು. ಆದರೆ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟೀಂ ಇಂಡಿಯಾ ಕೇವಲ 10 ರನ್ ಗಳಿಸುವಷ್ಟರಲ್ಲಿ ಶುಭ್‌ಮನ್ ಗಿಲ್ ರೂಪದಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಕೆಟ್ಟ ಆರಂಭದ ನಂತರ, ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ತಂಡದ ಇನ್ನಿಂಗ್ಸ್ ನಿಭಾಯಿಸಿ ತಮ್ಮ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದರು.
ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ ನಂತರ ಬೌಲರ್‌ಗಳು ಕೂಡ ತಮ್ಮ ಕೈಚಳಕ ತೋರಿದರು. ಹೀಗಾಗಿ ಆರಂಭದಿಂದಲೂ ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತ ಸಾಗಿದ ಜಿಂಬಾಬ್ವೆ ತಂಡ 18.4 ಓವರ್‌ಗಳಲ್ಲಿ 134 ರನ್ ಗಳಿಸಿ ಆಲೌಟ್ ಆಯಿತು. ಈ ಪಂದ್ಯದಲ್ಲಿ ಅವೇಶ್ ಖಾನ್ (Avesh Khan) ಮತ್ತು ಮುಖೇಶ್ ಕುಮಾರ್ (Mukesh Kumar) ಭಾರತದ ಪರ ಗರಿಷ್ಠ ತಲಾ 3 ವಿಕೆಟ್ ಪಡೆದರು. ಮತ್ತೊಮ್ಮೆ ರನ್ಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಿದ ರವಿ ಬಿಷ್ಣೋಯ್ 4 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ 2 ವಿಕೆಟ್ ಪಡೆದರು. ಇವರಲ್ಲದೇ ವಾಷಿಂಗ್ಟನ್ ಸುಂದರ್ ಕೂಡ 1 ವಿಕೆಟ್ ಪಡೆದರು. ಇದರಿಂದಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 100 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಉಭಯ ತಂಡಗಳ ನಡುವಿನ ಸರಣಿ ಇದೀಗ 1-1 ರಿಂದ ಸಮಬಲ ಸಾಧಿಸಿದೆ. ಇನ್ನು ಸರಣಿಯ ಮೂರನೇ ಪಂದ್ಯ ಜುಲೈ 10 ರಂದು ನಡೆಯಲಿದೆ.
ಶತಕ ವೀರರ ಎಲೈಟ್ ಪಟ್ಟಿಗೆ ಅಭಿ:
ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಲ್ಲೇ ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಕಡಿಮೆ ಎಸೆತಗಳಲ್ಲಿ ಶತಕ ಪೂರೈಸಿದ ದಿಗ್ಗರ ಎಲೈಟ್ ಪಟ್ಟಿ ಸೇರಿದ್ದಾರೆ. ಆರನ್ ಫಿಂಚ್, ಕ್ರಿಸ್‌ಗೇಲ್, ಕೊಲಿನ್ ಮನ್ರೋ, ರವೀಂದರ್‌ಪಾಲ್ ಸಿಂಗ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಈವರೆಗೆ 47 ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರರಾಗಿದ್ದರು. ಇದೀಗ ಈ ದಿಗ್ಗಜರ ಪಟ್ಟಿಗೆ ಅಭಿಷೇಕ್ ಶರ್ಮಾ ಸೇರ್ಪಡೆಗೊಂಡಿದ್ದಾರೆ.
ಮಿಂಚಿದ ರಿಂಕು, ರುತು:
ಇತ್ತ ಅಭಿಷೇಕ್ ಶರ್ಮಾ ಶತಕ ಸಿಡಿಸಿ ಪೆವಿಲಿಯನ್ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್ ಜೋಡಿ ಬ್ಯಾಟಿಂಗ್ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್ 47 ಎಸೆತಗಳಲ್ಲಿ 77 ರನ್ (1 ಸಿಕ್ಸರ್, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್ ಸ್ಫೋಟಕ 48 ರನ್ (22 ಎಸೆತ, 5 ಸಿಕ್ಸರ್, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್ ಗಿಲ್ 2 ರನ್ ಗಳಿಸಿದರು.
ಭಾರತ ತಂಡ: ಶುಭ್‌ಮನ್ ಗಿಲ್ (ನಾಯಕ), ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.
ಜಿಂಬಾಬ್ವೆ ತಂಡ: ತಡಿವಾನಾಶೆ ಮರುಮಣಿ, ಇನೋಸೆಂಟ್ ಕಯಾ, ಬ್ರಿಯಾನ್ ಬೆನೆಟ್, ಸಿಕಂದರ್ ರಜಾ (ನಾಯಕ), ಡಿಯೋನ್ ಮೈಯರ್ಸ್, ಜೊನಾಥನ್ ಕ್ಯಾಂಪ್‌ಬೆಲ್, ಕ್ಲೈವ್ ಮಡ್ನಾಡೆ (ವಿಕೆಟ್ ಕೀಪರ್), ವೆಸ್ಲಿ ಮಾಧೆವೆರೆ, ಲ್ಯೂಕ್ ಜೊಂಗ್ವೆ, ಬ್ಲೆಸ್ಸಿಂಗ್ ಮುಜರಬಾನಿ, ತೆಂಡೈ ಚಟಾರಾ.