IND vs SL: ಸೂರ್ಯಕುಮಾರ್ - ರಿಂಕು ಸಿಂಗ್ ಜಬರ್ದಸ್ತ್ ಬೌಲಿಂಗ್; ಶ್ರೀಲಂಕಾ ವಿರುದ್ಧ ಸೂಪರ್ ಓವರ್ ನಲ್ಲಿ ಗೆದ್ದ ಭಾರತ
IND vs SL: ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದ್ದ ಶ್ರೀಲಂಕಾ ಈ ಪಂದ್ಯವನ್ನು ಗೆಲ್ಲುವುದು ಖಚಿತವಾಗಿತ್ತು. ಆದರೆ ಬಳಿಕ ಪಾರಮ್ಯ ಮೆರೆದ ಭಾರತೀಯ ಬೌಲರ್ ಗಳು ಇನ್ನಿಲ್ಲದಂತೆ ಶ್ರೀಲಂಕಾ ದಾಂಡಿಗರನ್ನು ಕಾಡಿದರು.
3ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ವಿರೋಚಿತ ಜಯ ದಾಖಲಿಸಿದ್ದು, ಆ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಪಳ್ಳೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 138 ರನ್ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ಟೀಂ ಇಂಡಿಯಾ ಬೌಲರ್ ಗಳ ಮಾರಕ ಬೌಲಿಂಗ್ ಗೆ ಅಕ್ಷರಶಃ ತತ್ತರಿಸಿತು.
ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದ್ದ ಶ್ರೀಲಂಕಾ ಈ ಪಂದ್ಯವನ್ನು ಗೆಲ್ಲುವುದು ಖಚಿತವಾಗಿತ್ತು. ಆದರೆ ಬಳಿಕ ಪಾರಮ್ಯ ಮೆರೆದ ಭಾರತೀಯ ಬೌಲರ್ ಗಳು ಇನ್ನಿಲ್ಲದಂತೆ ಶ್ರೀಲಂಕಾ ದಾಂಡಿಗರನ್ನು ಕಾಡಿದರು.
ನಿಸ್ಸಾಂಕಾ 26 ರನ್, ಕುಸಾಲ್ ಮೆಂಡಿಸ್ 43 ರನ್ ಮತ್ತು ಕುಸಾಲ್ ಪೆರೆರಾ 46 ರನ್ ಗಳಿಸಿ ಲಂಕಾ ತಂಡವನ್ನು ಗೆಲುವಿನತ್ತ ನಡೆಸಿದ್ದರು. ಆದರೆ ಈ ಮೂರು ವಿಕೆಟ್ ಪತನವಾಗುತ್ತಿದ್ದಂತೆಯೇ ಶ್ರೀಲಂಕಾ ತಂಡದ ಬ್ಯಾಟರ್ ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ನಾಯಕ ಅಸಲಂಕಾ ಸೇರಿದಂತೆ ಎಲ್ಲ ಆಟಗಾರರೂ ಬಂದಷ್ಟೇ ವೇಗವಾಗಿ ಒಂದಂಕಿ ಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಶ್ರೀಲಂಕಾ ತಂಡ 20 ಓವರ್ ನಲ್ಲಿ 137 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ಪಂದ್ಯವನ್ನು ಟೈ ಮಾಡಿಕೊಂಡಿತು.
ಪಂದ್ಯದ ದಿಕ್ಕನ್ನೇ ಬದಲಿಸಿದ ಸೂರ್ಯ, ರಿಂಕು ಸಿಂಗ್ ಬೌಲಿಂಗ್
ಇನ್ನು ಈ ಪಂದ್ಯ ಬಹುತೇಕ ಶ್ರೀಲಂಕಾ ಪರ ವಾಲಿತ್ತು. ಈ ಹಂತದಲ್ಲಿ ಭಾರತದ ಸೂರ್ಯ ಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅದ್ಭುತ ಬೌಲಿಂಗ್ ಮಾಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಶ್ರೀಲಂಕಾ ತಂಡ ಗೆಲ್ಲಲು 12 ಎಸೆತದಲ್ಲಿ 9 ರನ್ ಬೇಕಿದ್ದಾಗ 18ನೇ ಓವರ್ ಎಸೆದ ರಿಂಕು ಸಿಂಗ್ ಅಕ್ಷರಶಃ ಮ್ಯಾಜಿಕ್ ಮಾಡಿದರು. ಈ ನಿರ್ಣಾಯಕ ಓವರ್ ನಲ್ಲಿ ರಿಂಕು 2 ವಿಕೆಟ್ ಪಡೆದು ಕೇವಲ 3ರನ್ ನೀಡಿ ಪಂದ್ಯವನ್ನು ಅಂತಿಮ ಓವರ್ ಗೆ ಕೊಂಡೊಯ್ದರು.
ಈ ಹಂತದಲ್ಲಿ ಅಂತಿಮ ಓವರ್ ಎಸೆಯಲು ಅನುಭವಿ ಬೌಲರ್ ಮಹಮದ್ ಸಿರಾಜ್ ಬರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾಯಕ ಸೂರ್ಯ ಕುಮಾರ್ ಯಾದವ್ ತಾವೇ ಅಂತಿಮ ಓವರ್ ಎಸೆಯಲು ನಿರ್ದರಿಸಿದರು. ಅಲ್ಲದೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಅದ್ಭುತ ಬೌಲಿಂಗ್ ಮಾಡಿದರು.
ಅಂತಿಮ ಓವರ್ ನಲ್ಲಿ ಗೆಲ್ಲಲು ಕೇವಲ 6ರನ್ ಗಳ ಅವಶ್ಯಕತೆ ಇದ್ದಾಗ ಸೂರ್ಯ 2ನೇ ಎಸೆತದಲ್ಲಿ ಕಮಿಂಡು ಮೆಂಡಿಸ್ ಮತ್ತು 3ನೇ ಎಸೆತದಲ್ಲಿ ತೀಕ್ಷಣ ವಿಕೆಟ್ ಪಡೆದು ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಅಂತಿಮ ಎಸೆತದಲ್ಲಿ ವಿಕ್ರಮ ಸಿಂಘೆ 2ರನ್ ಗಳಿಸಿ ಪಂದ್ಯ ಟೈ ಮಾಡಿದರು.
‘ಸೂಪರ್” ಓವರ್
ಬಳಿಕ ಶ್ರೀಲಂಕಾ ತಂಡಕ್ಕೆ ಸೂಪರ್ ಓವರ್ ನಲ್ಲಿ ವಾಷಿಂಗ್ಟನ್ ಸುಂದರ್ ಆಘಾತ ನೀಡಿದರು. ಕರಾರುವಕ್ಕಾದ ಬೌಲಿಂಗ್ ಮಾಡಿದ ಸುಂದರ್ ಮೊದಲ ಎಸೆತ ವೈಡ್ ಮಾಡಿದರು. ಆದರೆ ಬಳಿಕ ಸುಧಾರಿಸಿಕೊಂಡ ಸುಂದರ್ ನಂತರದ 1ನೇ ಎಸೆತದಲ್ಲಿ 1 ರನ್ ನೀಡಿದರು. ಆ ಮೂಲಕ ಶ್ರೀಲಂಕಾ ತಂಡ 2ನೇ ಗಳಿಸಿತು. ಆದರೆ 2 ಮತ್ತು 3ನೇ ಎಸೆತಗಳಲ್ಲಿ ಸುಂದರ್ ಸತತ 2 ವಿಕೆಟ್ ಗಳಿಸಿ ಶ್ರೀಲಂಕಾ ತಂಡವನ್ನು ಆಲೌಟ್ ಮಾಡಿದರು.
ಆ ಮೂಲಕ ಸೂಪರ್ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 3ರನ್ ಗಳ ಗುರಿ ನಿಗದಿಯಾಯಿತು. ಈ ಮೊತ್ತವನ್ನು ಸೂರ್ಯ ಕುಮಾರ್ ಯಾದವ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಗಿಟ್ಟಿಸುವ ಮೂಲಕ ಭಾರತಕ್ಕೆ ಭರ್ಜರಿ ಜಯ ತಂದಿತ್ತರು.
ಈ ಜಯದೊಂದಿಗೆ ಭಾರತ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಅಲ್ಲದೆ ನಾಯಕರಾಗಿ ಸೂರ್ಯ ಕುಮಾರ್ ಯಾದವ್ ಗೆ ಮೊದಲ ಸರಣಿ ಜಯ ಮತ್ತು ಮೊದಲ ಕ್ಲೀನ್ ಸ್ವೀಪ್ ಜಯವಾಗಿದೆ. ಇನ್ನು ಸೂಪರ್ ಓವರ್ ನಲ್ಲಿ ಸೂಪರ್ ಬೌಲಿಂಗ್ ಮಾಡಿದ ವಾಷಿಂಗ್ಟನ್ ಸುಂದರ್ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನಾರದರೆ, ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಭಾರತದ ನಾಯಕ ಸೂರ್ಯ ಕುಮಾರ್ ಯಾದವ್ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
ಉಭಯ ತಂಡಗಳು
ಭಾರತ ತಂಡ: ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.
ಶ್ರೀಲಂಕಾ ತಂಡ: ಅವಿಷ್ಕಾ ಫೆರ್ನಾಂಡೊ, ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ವನಿಂದು ಹಸರಂಗ, ದಸುನ್ ಶನಕ, ಕುಸಾಲ್ ಮೆಂಡಿಸ್, ದಿನೇಶ್ ಚಾಂಡಿಮಲ್ (ವಿಕೆಟ್ ಕೀಪರ್), ಮತಿಶ ಪತಿರಾನ, ಮಹೇಶ್ ತಿಕ್ಷಣ, ದುನಿತ್ ವೆಲಾಲಗೆ, ಬಿನೂರ ಫೆರ್ನಾಂಡೊ.