IND vs SL: ಸೂರ್ಯಾರ್ಭಟಕ್ಕೆ ಬೆಚ್ಚಿದ ಶ್ರೀಲಂಕಾ, ಭಾರತಕ್ಕೆ 43 ರನ್‌ಗಳ ಭರ್ಜರಿ ಗೆಲುವು
IND vs SL: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಗಳಿಸಿದ್ದು, ಆ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಸೂರ್ಯಕುಮಾರ್ ಯಾದವ್ (58 ರನ್) ಸ್ಪೋಟಕ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಯ ಸಹಾಯದಿಂದ ಭಾರತ ತಂಡ, ಮೊದಲನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 43 ರನ್‌ಗಳ ಭರ್ಜರಿ ಗೆಲುವು ಪಡೆದಿದೆ.
ಶನಿವಾರ ಇಲ್ಲಿನ ಪಲ್ಲೆಕೆಲೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 214ರನ್‌ಗಳ ಕಠಿಣ ಗುರಿ ಹಿಂಬಾಲಿಸಿದ ಶ್ರೀಲಂಕಾ ತಂಡ, ಕುಸಾಲ್ ಮೆಂಡಿಸ್ ಹಾಗೂ ಪಥುಮ್ ನಿಸಾಂಕ ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 19.2 ಓವರ್‌ಗಳಿಗೆ 170 ರನ್ ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಸೋಲು ಅನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಪವರ್‌ಪ್ಲೇನಲ್ಲಿ ಇಬ್ಬರೂ 74 ರನ್ ಸೇರಿಸಿದರು. ಗಿಲ್ 16 ಎಸೆತಗಳಲ್ಲಿ 34 ರನ್ ಮತ್ತು ಯಶಸ್ವಿ 21 ಎಸೆತಗಳಲ್ಲಿ 40 ರನ್ ಕಲೆಹಾಕಿದರು. ಆದಾಗ್ಯೂ, ಈ ಇಬ್ಬರೂ ಆಟಗಾರರು ಸತತ ಎರಡು ಎಸೆತಗಳಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದರೆ ನಾಯಕ ಸೂರ್ಯಕುಮಾರ್ ಯಾದವ್ ತಮ್ಮದೇ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಶ್ರೀಲಂಕಾ ತಂಡವನ್ನು ಮತ್ತೆ ಒತ್ತಡಕ್ಕೆ ತಳ್ಳಿದರು.
ಸೂರ್ಯ, ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ತಮ್ಮ ಅರ್ಧಶತಕವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದ ಸೂರ್ಯ 26 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು. ಅಂತಿಮವಾಗಿ ಪಂತ್ 33 ಎಸೆತಗಳಲ್ಲಿ 49 ರನ್ ಕೊಡುಗೆ ನೀಡಿದರೆ, ಅಕ್ಷರ್ ಪಟೇಲ್ ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡದ ಸ್ಕೋರನ್ನು 213 ರನ್‌ಗಳಿಗೆ ಕೊಂಡೊಯ್ದರು.
ಪಥುಮ್ ನಿಸಾಂಕ ಹೋರಾಟ ವ್ಯರ್ಥ
ಭಾರತ ನೀಡಿದ್ದ ಕಠಿಣ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡಕ್ಕೆ ಪಥುಮ್ ನಿಸಾಂಕ ಹಾಗೂ ಕುಸಾಲ್ ಮೆಂಡಿಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ 84 ರನ್ ಸಿಡಿಸಿ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಕೇವಲ 27 ಎಸೆತಗಳಲ್ಲಿ 45 ರನ್ ಸಿಡಿಸಿದ್ದ ಕುಸಾಲ್ ಮೆಂಡಿಸ್ ಅವರನ್ನು ಅರ್ಷದೀಪ್ ಸಿಂಗ್ ಔಟ್ ಮಾಡಿದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ ಪಥುಮ್ ನಿಸಾಂಕ, ಭಾರತದ ಬೌಲರ್‌ಗಳಿಗೆ ಬೆವರಿಳಿಸಿದರು
ಇವರು ಎದರಿಸಿದ ಕೇವಲ 48 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 79 ರನ್‌ಗಳನ್ನು ಸಿಡಿಸಿದ್ದರು. ಇವರು ಕ್ರೀಸ್‌ನಲ್ಲಿ ಇರುವವರೆಗೂ ಶ್ರೀಲಂಕಾ ತಂಡ ಗೆಲ್ಲುವ ನೆಚ್ಚಿನ ತಂಡವಾಗುತ್ತು. ಆದರೆ, 15ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಇವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ನಿಸಾಂಕ ವಿಕೆಟ್ ಒಪ್ಪಿಸಿದ ಬಳಿಕ ಶ್ರೀಲಂಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. 140 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡ ಮುಂದಿನ 30 ರನ್‌ಗಳ ಅಂತರದಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಪರಿಣಾಮಕಾರಿಯಾಗಿ ಬೌಲ್ ಮಾಡಿದ ರಿಯಾನ್ ಪರಾಗ್ 3 ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.
ಉಭಯ ತಂಡಗಳು
ಭಾರತ ತಂಡ: ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.
ಶ್ರೀಲಂಕಾ ತಂಡ: ಅವಿಷ್ಕಾ ಫೆರ್ನಾಂಡೊ, ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ವನಿಂದು ಹಸರಂಗ, ದಸುನ್ ಶನಕ, ಕುಸಾಲ್ ಮೆಂಡಿಸ್, ದಿನೇಶ್ ಚಾಂಡಿಮಲ್ (ವಿಕೆಟ್ ಕೀಪರ್), ಮತಿಶ ಪತಿರಾನ, ಮಹೇಶ್ ತಿಕ್ಷಣ, ದುನಿತ್ ವೆಲಾಲಗೆ, ಬಿನೂರ ಫೆರ್ನಾಂಡೊ.