IND vs BAN: ಆಸರೆಯಾದ ಅಶ್ವಿನ್- ಜಡೇಜಾ; ಸಚಿನ್-ಜಹೀರ್ ದಾಖಲೆ ಉಡೀಸ್!
IND vs BAN: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್ರೌಂಡರ್ ಆರ್ ಅಶ್ವಿನ್ ಭರ್ಜರಿ ಶತಕ ಸಿಡಿಸಿದ್ದು, ಭಾರತವನ್ನು ಅಪಾಯದಿಂದ ಮೇಲೆತ್ತಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬಾಂಗ್ಲಾದೇಶ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಅಕ್ಷರಶಃ ಬಾಂಗ್ಲಾ ಬೌಲರ್ ಗಳ ಎದುರು ಪರದಾಡಿತು.
ಕೇವಲ 108 ಎಸೆತಗಳಲ್ಲಿ 100 ರನ್ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 6ನೇ ಶತಕ ಸಿಡಿಸಿದರು. 144 ರನ್‍ಗಳಿಗೆ 6 ವಿಕೆಟ್ ಕಳೆದು ಕೊಂಡಿದ್ದಾಗ ಕಣಕ್ಕಿಳಿದ ಅಶ್ವಿನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 10 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಮೇಲಕ್ಕೆ ಎತ್ತಿದ್ದರು. ಈ ಮೂಲಕ ತವರು ನೆಲದಲ್ಲಿ ಎರಡನೇ ಶತಕ ಸಿಡಿಸಿದರು.
ಕೇವಲ 96 ರನ್ ಗಳನ್ನು ಸೇರಿಸುವಷ್ಟರಲ್ಲಿ ಭಾರತದ ಪ್ರಮುಖ 4 ವಿಕೆಟ್ ಗಳು ಪತನವಾದವು. ನಾಯಕ ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ ಶೂನ್ಯ ಸುತ್ತಿದರು. ವಿರಾಟ್ ಕೊಹ್ಲಿ ರನ್ ಗಳಿಕೆ ಕೂಡ 6 ರನ್ ಗೇ ಸೀಮಿತವಾಯಿತು. ಈ ಹಂತದಲ್ಲಿ ಜೊತೆಗೂಡಿದ ಜೈಸ್ವಾಲ್ ಮತ್ತು ರಿಷಬ್ ಪಂತ್ ಭಾರತ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು.
ಜೈಸ್ವಾಲ್ 56 ರನ್ ಗಳಿಸಿದರೆ, ಪಂತ್ 39 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆಎಲ್ ರಾಹುಲ್ 16 ರನ್ ಗಳಿಸಿ ಮೆಹ್ದಿ ಹಸನ್ ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತದ ಮಧ್ಯಮ ಕ್ರಮಾಂಕ ಕೂಡ ಅಪಾಯಕ್ಕೆ ಸಿಲುಕಿತ್ತು. ಆದರೆ 7 ವಿಕೆಟ್ ಗೆ ಜೊತೆಗೂಡಿದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೋಡಿ ಬಾಂಗ್ಲಾ ಬೌಲರ್ ಗಳನ್ನು ಕ್ರಮೇಣ ಕಾಡಲು ಆರಂಭಿಸಿದರು. ಯಾವ ಹಂತದಲ್ಲೂ ವಿಕೆಟ್ ಬಿಟ್ಟುಕೊಡದ ಈ ಜೋಡಿ 192 ರನ್ ಗಳ ಅಮೋಘ ಜೊತೆಯಾಟವಾಡಿತು.
114 ಎಸೆತಗಳನ್ನು ಎದುರಿಸಿ 85 ರನ್ ಗಳಿಸಿ ರವೀಂದ್ರ ಜಡೇಜಾ ಶತಕದ ಅಂಚಿನಲ್ಲಿದ್ದರೆ, 110 ಎಸೆತಗಳಲ್ಲಿ 102ರನ್ ಗಳಿಸಿರುವ ಅಶ್ವಿನ್ ಬಾಂಗ್ಲಾ ಬೌಲರ್ ಗಳ ಮೇಲೆ ಸವಾರಿ ಮಾಡಿದರು. 2 ಸಿಕ್ಸರ್ ಮತ್ತು 10 ಬೌಂಡರಿಗಳ ಮೂಲಕ ಶತಕ ಸಿಡಿಸಿ ಅಶ್ವಿನ್ ಸಂಭ್ರಮಿಸಿದರು. ಅಂದಹಾಗೆ ಇದು ಆರ್ ಅಶ್ವಿನ್ ರ 6ನೇ ಅಂತಾರಾಷ್ಟ್ರೀಯ ಟೆಸ್ಟ್ ಶತಕವಾಗಿದೆ.
ಬಾಂಗ್ಲಾದೇಶ ಪರ ಹಸನ್ ಮಹಮೂದ್ 4 ವಿಕೆಟ್ ಪಡೆದರೆ, ನಹೀದ್ ರಾಣಾ, ಮೆಹ್ದಿ ಹಸನ್ ತಲಾ 1 ವಿಕೆಟ್ ಪಡೆದರು.
ಸಚಿನ್-ಜಹೀರ್ ದಾಖಲೆ ಉಡೀಸ್!
ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೊತೆಯಾಗಿ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇಂದು ಕೂಡ ಅದೇ ಕೆಲಸವನ್ನು ಮಾಡಿರುವ ಈ ಜೋಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, 7ನೇ ವಿಕೆಟ್‌ಗೆ ದಾಖಲೆಯ ಜೊತೆಯಾಟವನ್ನು ನಡೆಸುವುದರೊಂದಿಗೆ ದಿಗ್ಗಜರ ದಾಖಲೆಯನ್ನು ಪುಡಿಗಟ್ಟಿದೆ.
ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್ ಆಡುತ್ತಿರುವ ಭಾರತ 144 ರನ್‍ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 7ನೇ ವಿಕೆಟ್‌ಗೆ ಜೊತೆಯಾದ ಅಶ್ವಿನ್ ಹಾಗೂ ಜಡೇಜಾ ಮುರಿಯದ ವಿಕೆಟ್‌ಗೆ 195 ರನ್‌ಗಳ ದಾಖಲೆಯ ಜೊತೆಯಾಟವನ್ನು ಕಟ್ಟಿದ್ದಾರೆ.
ಈ 195 ರನ್‌ಗಳ ಜೊತೆಯಾಟದಲ್ಲಿ ಅಶ್ವಿನ್ ಪಾಲು ಅಜೇಯ 102 ರನ್ಗಳಿದ್ದರೆ, ಜಡೇಜಾ ಪಾಲು ಅಜೇಯ 86 ರನ್ಗಳಿವೆ. ಈ ಇಬ್ಬರು ಈ ಆಟಗಾರರು 7ನೇ ವಿಕೆಟ್‌ಗೆ ಈ ಜೊತೆಯಾಟವನ್ನು ಕಟ್ಟುವ ಮೂಲಕ 2004 ರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವೇಗಿ ಜಹೀರ್ ಖಾನ್ ಜೊತೆಯಾಗಿ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
20 ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವೇಗಿ ಜಹೀರ್ ಖಾನ್ ಇದೇ ಬಾಂಗ್ಲಾದೇಶ ವಿರುದ್ಧ ಡಾಕಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 10ನೇ ವಿಕೆಟ್‌ಗೆ 133 ರನ್‌ಗಳ ಜೊತೆಯಾಟ ಕಟ್ಟಿದ್ದರು. ಇದೀಗ 195 ರನ್‌ಗಳ ಜೊತೆಯಾಟವನ್ನಾಡಿರುವ ಅಶ್ವಿನ್ ಹಾಗೂ ಜಡೇಜಾ ಬಾಂಗ್ಲಾದೇಶ ವಿರುದ್ಧ ಭಾರತದ ಪರ ಏಳನೇ ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗೆ ಅತ್ಯಧಿಕ ಜೊತೆಯಾಟವನ್ನು ಮಾಡಿದ ದಾಖಲೆ ನಿರ್ಮಿಸಿದ್ದಾರೆ.
ಇದಲ್ಲದೆ ಈ ಜೋಡಿ 24 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶದ ವಿರುದ್ಧ 7ನೇ ವಿಕೆಟ್‌ಗೆ ಭಾರತ ದಾಖಲಿಸಿದ ಅತ್ಯಧಿಕ ರನ್ ಜೊತೆಯಾಟದ ದಾಖಲೆ ಸೌರವ್ ಗಂಗೂಲಿ ಮತ್ತು ಸುನಿಲ್ ಜೋಶಿ ಹೆಸರಿನಲ್ಲಿತ್ತು. ಈ ಇಬ್ಬರು 2000 ರಲ್ಲಿ ಢಾಕಾ ಟೆಸ್ಟ್ ಪಂದ್ಯದಲ್ಲಿ 121 ರನ್‌ಗಳ ಜೊತೆಯಾಟವನ್ನು ಮಾಡಿದ್ದರು. ಇದೀಗ ಆ ದಾಖಲೆ ಅಶ್ವಿನ್ ಮತ್ತು ಜಡೇಜಾ ಪಾಲಾಗಿದೆ.
ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಜೋಡಿ ಇನ್ನೂ ಅಜೇಯರಾಗಿ ಉಳಿದಿದೆ. ಹೀಗಾಗಿ ಎರಡನೇ ದಿನದ ಆಟದಲ್ಲಿ, ಈ ಇಬ್ಬರೂ ಆಟಗಾರರು ತಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ಅವಕಾಶ ಪಡೆದಿದ್ದಾರೆ. ಈ ಇಬ್ಬರು ಆಟಗಾರರು ಇದುವರೆಗೆ 227 ಎಸೆತಗಳನ್ನು ಎದುರಿಸಿ ಅಜೇಯ 195 ರನ್ ಜೊತೆಯಾಟ ನಡೆಸಿದ್ದಾರೆ.