IND VS AUS: ಆಸ್ಟ್ರೇಲಿಯ ವಿರುದ್ಧ ಭರ್ಜರಿ ಜಯ ಸಾಧಿಸಿ ನಂ.1 ಪಟ್ಟಕ್ಕೇರಿದ ಭಾರತ!
ಮೊಹಾಲಿಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾ (India vs Australia) ತಂಡವನ್ನು ಸೋಲಿಸಿದೆ. ನಾಯಕ ಕೆಎಲ್ ರಾಹುಲ್ (KL Rahul) ಅವರ ಅಜೇಯ 58 ರನ್‌ಗಳ ಇನ್ನಿಂಗ್ಸ್ ಹಾಗೂ ಆರಂಭಿಕರಿಬ್ಬರ ಶತಕದ ಜೊತೆಯಾಟದ ಜೊತೆಗೆ ಸೂರ್ಯಕುಮಾರ್ (Suryakumar Yadav) ಅವರ ನಿರ್ಣಾಯಕ ಅರ್ಧಶತಕದ ನೆರವಿನೊಂದಿಗೆ ಭಾರತ ಈಗ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್ ಯಾದವ್ ಇಲ್ಲದೆ ಕಣಕ್ಕಿಳಿದಿತ್ತು.
ಅದಾಗ್ಯೂ ಯುವ ಪಡೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊಹಮ್ಮದ್ ಶಮಿ ದಾಳಿಗೆ ನಲುಗಿ 276 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತ ನಾಲ್ವರ ಅರ್ಧಶತಕದ ಆಧಾರದ ಮೇಲೆ 49ನೇ ಓವರ್‌ನಲ್ಲಿ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ (Team India) ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನವನ್ನೂ ಕೂಡ ಆಲಂಕರಿಸಿದೆ.
2023ರ ವಿಶ್ವಕಪ್‌ಗೆ ಸಿದ್ಧತೆಯಾಗಿ ನಡೆಯುತ್ತಿರುವ ಈ ಸರಣಿಯ ಮೊದಲ ಮತ್ತು ಎರಡನೇ ಪಂದ್ಯಗಳಿಗೆ ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ಕೂಡ ತನ್ನ ಪ್ರಮುಖ ಆಟಗಾರರಿಲ್ಲದೆ ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ಹೀಗಿರುವಾಗ ಬಹುತೇಕ ಸಮಬಲದ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ. ಇಷ್ಟೇ ಅಲ್ಲ, ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 27 ವರ್ಷಗಳ ನಂತರ ಏಕದಿನ ಪಂದ್ಯವನ್ನು ಗೆದ್ದ ಸಾಧನೆ ಮಾಡಿದೆ.
Sealed with a SIX.
— BCCI (@BCCI) September 22, 2023
Captain @klrahul finishes things off in style.#TeamIndia win the 1st ODI by 5 wickets.
Scorecard - https://t.co/H6OgLtww4N… #INDvAUS@IDFCFIRSTBank pic.twitter.com/PuNxvXkKZ2
ವಾರ್ನರ್-ಸ್ಮಿತ್ ಉತ್ತಮ ಜೊತೆಯಾಟ
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕನ ಆಯ್ಕೆಗೆ ತಂಡದ ವೇಗಿಗಳು ನ್ಯಾಯ ಒದಗಿಸಿದರು. ಅದರಲ್ಲೂ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದ ಮೊಹಮ್ಮದ್ ಶಮಿ ಮಾರಕ ದಾಳಿ ನಡೆಸಿದರು. ಮೊದಲ ಓವರ್‌ನಲ್ಲೇ ವಿಕೆಟ್ ಬೇಟೆ ಆರಂಭಿಸಿದ ಶಮಿ, ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಮಿಚೆಲ್ ಮಾರ್ಷ್ ಅವರನ್ನು ಪೆವಿಲಿಯನ್ಗಟ್ಟಿದರು. ಆದರೆ ಆ ಬಳಿಕ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ತಂಡದ ಇನ್ನಿಂಗ್ಸ್ ನಿಭಾಯಿಸಿ 94 ರನ್‌ಗಳ ತ್ವರಿತ ಜೊತೆಯಾಟವನ್ನು ಹಂಚಿಕೊಂಡರು. ಈ ಅವಧಿಯಲ್ಲಿ ವಾರ್ನರ್ ಅರ್ಧಶತಕವನ್ನೂ ಪೂರೈಸಿದರು.
No. 1 Test team ☑️
— BCCI (@BCCI) September 22, 2023
No. 1 ODI team ☑️
No. 1 T20I team ☑️#TeamIndia reigns supreme across all formats ?? pic.twitter.com/rB5rUqK8iH
ಮೊಹಮ್ಮದ್ ಶಮಿಯ ಸೂಪರ್ ಸ್ಪೆಲ್
ಆದರೆ ಇಲ್ಲಿಂದ ಟೀಂ ಇಂಡಿಯಾ ಪಂದ್ಯದಲ್ಲಿ ಪುನರಾಗಮನ ಮಾಡಿತು. ಇದರಲ್ಲಿ ಶಮಿ ಮತ್ತೊಮ್ಮೆ ತಂಡಕ್ಕೆ ಕೊಡುಗೆ ನೀಡಿದರು. ಮೊದಲು ರವೀಂದ್ರ ಜಡೇಜಾ, ಅರ್ಧಶತಕ ಸಿಡಿಸಿದ್ದ ವಾರ್ನರ್ (52) ಅವರ ವಿಕೆಟ್ ಪಡೆದರೆ, ನಂತರ ಶಮಿ ಸ್ಮಿತ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ ಮಾರ್ನಸ್ ಲಬುಶೇನ್ ಮತ್ತು ಕ್ಯಾಮರೂನ್ ಗ್ರೀನ್ ನಡುವೆ ಅಲ್ಪಾವಧಿಯ ಪಾಲುದಾರಿಕೆ ನಡೆಯಿತು. ಆದರೆ ಮತ್ತೆ ಟೀಂ ಇಂಡಿಯಾ ಪುನರಾಗಮನ ಮಾಡಿ ಒಂದರ ಹಿಂದೆ ಒಂದರಂತೆ ಲಬುಶೇನ್ ಮತ್ತು ಗ್ರೀನ್ ಅವರ ವಿಕೆಟ್ಗಳನ್ನು ಪಡೆಯಿತು.
ಮೊಹಮ್ಮದ್ ಶಮಿ (5/51) ನಂತರ ಮಾರ್ಕಸ್ ಸ್ಟೊಯಿನಿಸ್ ಮತ್ತು ಮ್ಯಾಥ್ಯೂ ಶಾರ್ಟ್ ಅವರ ವಿಕೆಟ್ ಪಡೆದರರೆ, ಜಸ್ಪ್ರೀತ್ ಬುಮ್ರಾ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಜೋಶ್ ಇಂಗ್ಲಿಸ್ (45) ಅವರ ವಿಕೆಟ್ ಪಡೆದರು. ಕೊನೆಯ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಕೆಲವು ದೊಡ್ಡ ಹೊಡೆತಗಳನ್ನು ಬಾರಿಸಿ ತಂಡವನ್ನು 276 ರನ್‌ಗಳತ್ತ ಕೊಂಡೊಯ್ದರು.
ಶುಭ್ಮನ್- ರುತುರಾಜ್ ಶತಕದ ಜೊತೆಯಾಟ
ಈ ಪಂದ್ಯದಲ್ಲಿ ಟೀಂ ಇಂಡಿಯಾ ರುತುರಾಜ್ ಗಾಯಕ್ವಾಡ್‌ಗೆ ಅವಕಾಶ ನೀಡಿ ಶುಭ್ಮನ್ ಗಿಲ್ ಅವರೊಂದಿಗೆ ಓಪನಿಂಗ್ ಮಾಡಲು ಅವಕಾಶ ನೀಡಿತ್ತು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಟೀಂ ಇಂಡಿಯಾಕ್ಕೆ ಅದ್ಭುತ ಆರಂಭವನ್ನು ನೀಡಿ, ಕೇವಲ 16 ನೇ ಓವರ್‌ನಲ್ಲಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಪ್ರಚಂಡ ಫಾರ್ಮ್ನಲ್ಲಿದ್ದ ಗಿಲ್ ಕೇವಲ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಗಾಯಕ್ವಾಡ್ ಕೂಡ ಮೂರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು.
ಆಡಮ್ ಝಂಪಾ ಬೌಲಿಂಗ್ನಲ್ಲಿ ಗಾಯಕ್ವಾಡ್ (71) ಅವರ ವಿಕೆಟ್‌ನೊಂದಿಗೆ ಈ ಇಬ್ಬರ ನಡುವಣ141 ರನ್‌ಗಳ ಜೊತೆಯಾಟ ಮುರಿದುಬಿತ್ತು. ತವರು ನೆಲದಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಗಿಲ್ (74) ಶತಕ ಪೂರೈಸಲು ಸಾಧ್ಯವಾಗದಿದ್ದರೂ ತಂಡಕ್ಕೆ ಅಗತ್ಯವಾದ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ಏಕದಿನ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡುತ್ತಿರುವ ಶ್ರೇಯಸ್ ಅಯ್ಯರ್ ದುರದೃಷ್ಟವಶಾತ್ ರನೌಟ್ ಆದರೆ, ಇಶಾನ್ ಕಿಶನ್ ಕೂಡ ಕೆಲ ಹೊತ್ತು ಕಾದು ಪೆವಿಲಿಯನ್‌ಗೆ ಮರಳಿದರು.
ಅಬ್ಬರಿಸಿದ ಸೂರ್ಯ
ಇನ್ನು ಆಸೀಸ್ ವಿರುದ್ಧ ಕಳೆದ ಮೂರು ಇನ್ನಿಂಗ್ಸ್ಗಳಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ 0, 0, 0 ರನ್ ಗಳಿಸಿದ್ದ ಸೂರ್ಯ, ಈ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ ಏಕದಿನ ಮಾದರಿಯಲ್ಲಿ ಮೂರನೇ ಅರ್ಧಶತಕ ಬಾರಿಸಿದರು. ಅಲ್ಲದೆ ನಾಯಕ ರಾಹುಲ್ ಜತೆಗೂಡಿ ಸೂರ್ಯ (50) 80 ರನ್‌ಗಳ ಜೊತೆಯಾಟ ನಡೆಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಆದರೆ ತಂಡ ಗೆಲುವಿನ ಸಮೀಪ ಇದ್ದಾಗ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ನಾಯಕ ರಾಹುಲ್ ಹಾಗೂ ಜಡೇಜಾ ತಂಡವನ್ನು ಗೆಲುವಿನ ದಡ ಸೇರಿಸಿದರು.