ದೇವಸ್ಥಾನದಲ್ಲಿ ಪತ್ನಿಯ ಕಣ್ಣೆದುರೇ ಪತಿಯ ಬರ್ಬರ ಹತ್ಯೆ
ಬೆಳಗಾವಿ: ಅಮಾವಾಸ್ಯೆ ಎಂದು ದೇವಸ್ಥಾನಕ್ಕೆ ಹೋದ ಸಂದರ್ಭ ಪತ್ನಿಯ (Wife) ಎದುರೇ ಗಂಡನ ಬರ್ಬರ ಹತ್ಯೆ (Murder) ಮಾಡಿರುವ ಘಟನೆ ಮೂಡಲಗಿ (Mudalagi) ತಾಲೂಕಿನ ಬನಸಿದ್ದೇಶ್ವರ ದೇವಸ್ಥಾನ (Banasiddeshwara Temple) ಮುಂದೆ ನಡೆದಿದೆ.
ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಬನಸಿದ್ದೇಶ್ವರ ದೇವಸ್ಥಾನದ ಮುಂದೆ ಹೆಂಡತಿಯ ಕಣ್ಣೆದುರೇ ಗಂಡನ (Husband) ಮೇಲೆ ಮಚ್ಚು ಲಾಂಗುಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಘಟನೆಯಲ್ಲಿ ಶಂಕರ್ ಸಿದ್ದಪ್ಪ ಜಗಮುತ್ತಿ(25) ಮೃತಪಟ್ಟಿದ್ದಾರೆ.
ಮೃತ ಶಂಕರ್ ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಅಮಾವಾಸ್ಯೆ ಹಿನ್ನೆಲೆ ಇಂದು ಪತ್ನಿ ಪ್ರಿಯಾಂಕಾ ಜೊತೆಗೆ ದೇವಸ್ಥಾನಕ್ಕೆಂದು ಬಂದಿದ್ದರು. ವಡೇರಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದ ವೇಳೆ ಘಟನೆ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪ- ಹಲ್ಲೆಗೈದ ನಾಲ್ವರು ಅರೆಸ್ಟ್
ರಾಯಚೂರು: ಇನ್ಸ್ಟಾಗ್ರಾಂ ಪೋಸ್ಟ್ (Social Media) ವಿಚಾರಕ್ಕೆ ಹಿಂದೂ ಯುವಕರ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿರುವ ಘಟನೆ ಸಿಂಧನೂರಿನ (Sindhanur) ಆರ್‌ಹೆಚ್ ಕ್ಯಾಂಪ್2 ರಲ್ಲಿ ನಡೆದಿದೆ.
ಈ ಸಂಬಂಧ ನಾಲ್ಕು ಜನ ಯುವಕರನ್ನು ಪೊಲೀಸರು (Police) ಬಂಧಿಸಿದ್ದಾರೆ. ಅಲ್ಲದೇ 30 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಅಕ್ಬರ್, ಶಾಮೀದ್, ತಾಜುದ್ದೀನ್ ಮತ್ತು ಸಮೀರ್ ಎಂದು ಗುರುತಿಸಲಾಗಿದೆ.
ಯುವತಿಯ ಹೆಸರಿನಲ್ಲಿ ಫೇಕ್ ಅಕೌಂಟ್ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಬಂಧಿತರು ಸಾಮಾಜಿಕ ಜಾಲತಾಣದ ಗ್ರೂಪ್‍ನಲ್ಲಿದ್ದ ಯುವಕರನ್ನ ವಿಚಾರಿಸಲು ತೆರಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ದುರ್ಗಾದೇವಿ ದೇವಾಲಯದ ಮುಂದೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಪೋಸ್ಟ್ ಮಾಡಿದವರು ಯಾರು ಎನ್ನುವುದು ಗೊತ್ತಿದ್ದರೂ ಹೇಳುತ್ತಿಲ್ಲ ಎಂದು ಬಂಧಿತರು ವಾದಿಸಿದ್ದಾರೆ. ಬಳಿಕ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ .ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.