ಪರೀಕ್ಷೆಯಲ್ಲಿ ನಕಲು: ಮಂಗಳೂರು ಮೂಲದ ವಿದ್ಯಾರ್ಥಿ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಬೆಂಗಳೂರು: ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದ ಮಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ಕಾಲೇಜಿನ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಗಿರಿನಗರ ನಿವಾಸಿ ಆದಿತ್ಯ ಪ್ರಭು (19) ಆತ್ಮಹತ್ಯೆ ಮಾಡಿಕೊಂಡವರು. ಮಂಗಳೂರು ಮೂಲದ ಇವರು ಪೋಷಕರ ಜತೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಬ್ರಿಗೇಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದು, ಹೊಸಕೆರೆ ಹಳ್ಳಿ ಸಮೀಪದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಟೆಕ್‌ನ ದ್ವಿತೀಯ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ.
ಸೋಮವಾರ ಪರೀಕ್ಷೆಯಿದ್ದು, ಈ ವೇಳೆ ಮೊಬೈಲ್ ಮೂಲಕ ನಕಲು ಮಾಡುತ್ತಿದ್ದ. ಅದನ್ನು ಗಮನಿಸಿದ ಶಿಕ್ಷಕರು, ಆತನನ್ನು ಕೊಠಡಿಯಿಂದ ಹೊರಗೆ ಕರೆತಂದು ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಆಡಳಿತ ಮಂಡಳಿ ಕೂಡಲೇ ಆತನ ಪೋಷಕರಿಗೆ ಕಾಲೇಜಿಗೆ ಬರುವಂತೆ ತಿಳಿಸಿದ್ದಾರೆ. ಅದರಿಂದ ಬೇಸರಗೊಂಡು 9ನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತೇಕ ಘಟನೆ: ವಿದ್ಯುತ್ ಪ್ರವಹಿಸಿ ಒಟ್ಟು 32 ಕುರಿಗಳು ಬಲಿ
ದಾವಣಗೆರೆ: ಜಿಲ್ಲೆಯ ಕೂಡ್ಲಿಗಿ(Kudligi) ತಾಲೂಕಿನ ಕಾನಾಹೊಸಳ್ಳಿ ಪಟ್ಟಣದ ಹೊರವಲಯದ ಜಮೀನಿನಲ್ಲಿ ವಿದ್ಯುತ್ ತಂತಿ ಹರಿದು ಬಿದ್ದು 17 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಹನುಮಜ್ಜರ ಪರಸಪ್ಪ ಎನ್ನುವವರಿಗೆ ಸೇರಿದ 13 ಕುರಿ, 2 ಟಗರು, 2 ಮೇಕೆಗಳು ಇದಾಗಿದೆ. ಇನ್ನು ಕುರಿಗಳು ಮೇಯಲು ಹೋದಾಗ ತುಂಡಾಗಿ ಬಿದ್ದು 11 ಕೆವಿ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ನಡೆದಿದೆ.
ಪಕ್ಕದಲ್ಲೇ ಇದ್ದ ಪರಸಪ್ಪ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು, ಪಶು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿ ಸಾಕಾಣಿಕೆಯಿಂದಲೇ ಕುರಿಗಾಹಿ ಪರಸಪ್ಪ ಅವರ ಜೀವನ ನಡೆಯುತ್ತಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಇನ್ನು ಈ ಘಟನೆ ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.