ನಾಳೆ ಬಿಜೆಪಿ ಮಹತ್ವದ ಸಭೆ: ಕರ್ನಾಟಕದ 20 ಸ್ಪರ್ಧಿಗಳ ಹೆಸರು ಬಿಡುಗಡೆ ಸಾಧ್ಯತೆ.!
ಭಾನುವಾರ ಬಿಜೆಪಿ ಮಹತ್ವದ ಸಭೆ ನಡೆಸಲಿದ್ದು ಕರ್ನಾಟಕದ 20 ಸ್ಪರ್ಧಿಗಳ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ. ಈ ಸಭೆ ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿದ್ದು, ನಾಡಿದ್ದು ಬಳಿಕ ಎರಡನೇ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಕರ್ನಾಟಕದ 18 ರಿಂದ 20 ಲೋಕಸಭಾ ಕ್ಷೇತ್ರಗಳನ್ನೂ ಒಳಗೊಂಡಂತೆ ಬಿಜೆಪಿಯ ಅಭ್ಯರ್ಥಿಗಳ ಎರಡನೇ ಪಟ್ಟಿ ಬರುವ ಸೋಮವಾರ ಅಥವಾ ಮಂಗಳವಾರ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
ಭಾನುವಾರ ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ರಾಜ್ಯದ ಅರ್ಭಯರ್ಥಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದೀಯ ಮಂಡಳಿ ಸದಸ್ಯರು ಆಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಸರತ್ತು ನಡೆಸಿದ್ದಾರೆ.
ಆ ಕರಸತ್ತಿನ ಬಳಿಕ ಕೆಲವು ಕ್ಷೇತ್ರಗಳಿಗೆ ಒಂದು ಹೆಸರು, ಇನ್ನು ಕೆಲವು ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಹೆಸರುಗಳ ಪಟ್ಟಿಯನ್ನು ಸಾಧಕ-ಬಾಧಕಗಳೊಂದಿಗೆ ವರಿಷ್ಠರಿಗೆ ನೀಡಲಾಗಿದೆ. ಈ ಪಟ್ಟಿಯನ್ನು ಮುಂದಿಟ್ಟುಕೊಂಡು ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರನ್ನು ಒಳಗೊಂಡ ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ.
ಈಗಾಗಲೇ ಕಳೆದ ವಾರ ಪ್ರಕಟಿಸಿದ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 195 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲಾಗಿತ್ತು.
ಇದೀಗ ಭಾನುವಾರ ಸಭೆಯ ಬಳಿಕ ಎರಡನೇ ಪಟ್ಟಿ ಅಂತಿಮಗೊಳಿಸಿ ಸೋಮವಾರ ಅಥವಾ ಮಂಗಳವಾರ ಬಿಡುಗಡೆ ಮಾಡುವ ಉದ್ದೇಶವಿದೆ. ಇದರಲ್ಲಿ ರಾಜ್ಯದ ಒಟ್ಟು 28 ಲೋಕಸಭಾಕ್ಷೇತ್ರಗಳ ಪೈಕಿ ಗೊಂದಲವಿಲ್ಲದ ಅಥವಾ ಇತ್ಯಾರ್ಥಗೊಳ್ಳುವ 18 ರಿಂದ 20 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮಿತ್ರ ಪಕ್ಷ ಜೆಡಿಎಸ್‌ಗೆ ಮೂರರಿಂದ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದ್ದು, ಅಧಿಕೃತವಾಗಿ ಅಂತಿಮಗೊಂಡಿಲ್ಲ. ಈ ಸಂಬಂಧ ಮಾತುಕತೆ ನಡೆಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಶೀಘ್ರದಲ್ಲೇ ದೆಹಲಿಗೆತೆರಳುವ ಸಾಧ್ಯತೆ ಇದೆ.
ಆ ಮಾತು ಕತೆ ವಿಳಂಬವಾದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳ ಬಗ್ಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಫೋಷಣೆ ಮಾಡುವುದಿಲ್ಲ. ಅಂಥ ನಾಲ್ಕೈದು ಕ್ಷೇತ್ರಗಳನ್ನು ಮೂರನೇ ಪಟ್ಟಿಯಲ್ಲಿ ಘೋಷಿಸಬಹುದು ಎನ್ನಲಾಗಿದೆ.
ಮೂರು ದಿನಗಳ ಕಾಲ ದೆಹಲಿಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಯಡಿಯೂರಪ್ಪ ಮತ್ತಿತರ ನಾಯಕರು ಮಹಾಶಿವರಾತ್ರಿ ಹಬ್ಬದ ಹಿನ್ನೆಯಲ್ಲಿ ಬೆಂಗಳೂರಿಗೆ ವಾಪಾಗಿದ್ದರು. ಮತ್ತೆ ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಿಗ್ಗೆ ದೆಹಲಿಗೆ ತೆರಳುವ ಸಾಧ್ಯತೆ ಹೆಚ್ಚಿದೆ.
ಎರಡನೇ ಪಟ್ಟಯಲ್ಲಿ ಘೋಷಣೆಯಾಗಬಹುದಾದ ಕ್ಷೇತ್ರಗಳು: ಶಿವಮೊಗ್ಗ, ಚಿಕ್ಕೋಡಿ, ದಾವಣಗೆರೆ, ಕಲಬುರಗಿ, ಬಳ್ಳಾರಿ, ರಾಯಚೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ತುಮಕೂರು, ಉಡುಪಿ-ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಹಾವೇರಿ, ಬೆಳಗಾವಿ.