IIM ಪದವೀಧರ, ಅಲೋಶಿಯಸ್ ಹಳೆ ವಿದ್ಯಾರ್ಥಿ, ಸೇನೆಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಈ ಬಾರಿ ವಿದ್ಯಾವಂತರ ಊರು ಮಂಗಳೂರು ಲೋಕಸಭೆಯ ಅಭ್ಯರ್ಥಿ!
ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು , ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕ್ಯಾಪ್ಟನ್ ಬ್ರಿಜೇಶ್ ಚೌಟ (Captain Brijesh Chowta) ಹೆಸರು ಪ್ರಕಟವಾಗಿದ್ದು, ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಕೈ ತಪ್ಪಿದೆ.
ಕ್ಯಾಪ್ಟನ್ ಬ್ರಿಜೇಶ್ ಚೌಟರ ಹಿನ್ನೆಲೆ ಏನು?
ಕಾಲೇಜು ದಿನಗಳಲ್ಲಿಯೇ ಎನ್‌ಸಿಸಿ(NCC)ಯಲ್ಲಿ ಹೆಸರು ಮಾಡಿ ಸೇನೆಗೆ ಸೇರ್ಪಡೆಯಾಗಿದ್ದರು. ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು(PUC) ಮತ್ತು ಬಿಎಸ್ಸಿ(BSC) ಪದವಿ ಪೂರೈಸಿದ್ದ ಅವರು ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂ(IIM)ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಪದವಿಯಲ್ಲಿದ್ದಾಗ ಎನ್‌ಸಿಸಿಯಲ್ಲಿ ಮಂಗಳೂರು ವಿ.ವಿ.ಯಲ್ಲಿ “ಬೆಸ್ಟ್ ಕೆಡೆಟ್’ ಎಂದು ಗುರುತಿಸಿದ್ದರು. ದಿಲ್ಲಿ(Delhi) ರಿಪಬ್ಲಿಕ್ ಪರೇಡ್‌ನಲ್ಲಿ ಎನ್‌ಸಿಸಿ(NCC) ಕೆಡೆಟ್ ಆಗಿ ಪಾಲ್ಗೊಂಡಿದ್ದರು.
UPSC ಆಯೋಜಿಸುವ ಕಂಬೈನ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ (CDSE) ಪರೀಕ್ಷೆ ಹಾಗೂ SSB ಸಂದರ್ಶನದಲ್ಲಿ ತೇರ್ಗಡೆಗೊಂಡು ಚೆನ್ನೈಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭೂ ಸೇನೆಯ ಗೋರ್ಖಾ ರೈಫಲ್ಸ್‌ನ 7ನೇ ಬೆಟಾಲಿಯನ್‌ನಲ್ಲಿ ಅಧಿಕಾರಿಯಾಗಿದ್ದರು. ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
2011ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಊರಿಗೆ ಮರಳಿದ್ದ ಚೌಟ ಆರೆಸ್ಸೆಸ್(RSS) ಮತ್ತು ಬಿಜೆಪಿ(BJP)ಯಲ್ಲಿ ಗುರುತಿಸಿಕೊಂಡಿದ್ದರು. 2013ರಲ್ಲಿ ಯುವ ಮೋರ್ಚಾದ ದ.ಕ. ಜಿಲ್ಲಾ ಪ್ರ. ಕಾರ್ಯದರ್ಶಿ, 2016-19ರಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಆನಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದ್ದರು.
ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಒಬ್ಬರು. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಬೇಕೆಂದು ನಿಶ್ಚಯಿಸಿ, ಯುವ ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಸತತ ಏಳು ವರ್ಷಗಳಿಂದ ಕುಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಯಶಸ್ವಿಯಾಗಿ ಕಂಬಳ ಆಯೋಜಿಸಿದ್ದರು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಂಟ ಸಮುದಾಯದ ಪ್ರಮುಖ ಗುತ್ತಿನ ಮನೆಗೆ ಸೇರಿದ್ದರೂ ಅವಿವಾಹಿತರಾಗಿಯೇ ಇದ್ದು ತನ್ನ ಸಂಪೂರ್ಣ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.ಹೀಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜಕೀಯಕ್ಕೆ ಆಗಮಿಸಿ, ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.