ಗರ್ಭಗುಡಿ ಪ್ರವೇಶಿಸಿದ ರಾಮಲಲ್ಲಾ ವಿಗ್ರಹ
ಅಯೋಧ್ಯೆ (ರಾಮಮಂದಿರ): ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳು ನಡೆಯುತ್ತಿವೆ. ಇಂದು (ಗುರುವಾರ) ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ರಾಮನ ವಿಗ್ರಹವನ್ನು ತರಲಾಗಿದೆ.
150-200 ಕೆಜಿ ತೂಕದ ವಿಗ್ರಹವನ್ನು ಕ್ರೇನ್ ಸಹಾಯದಿಂದ ಒಳಗೆ ತರುವ ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಮಲಲ್ಲಾನ ವಿಗ್ರಹವನ್ನು ಬುಧವಾರ ಸಂಜೆ ಅಯೋಧ್ಯೆ ದೇವಸ್ಥಾನಕ್ಕೆ ತರಲಾಗಿತ್ತು. ಅದನ್ನು ಗರ್ಭಗುಡಿಯಲ್ಲಿ ಇರಿಸಲು ಕ್ರೇನ್ ಬಳಸಿ ಮೇಲೆತ್ತಲಾಯಿತು. ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೂ ಮೊದಲು ಗರ್ಭಗುಡಿಯಲ್ಲಿ ವಿಗ್ರಹವನ್ನು ಸ್ಥಾಪಿಸಲಾಗುವುದು.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ಸುಮಾರು 150-200 ಕೆಜಿ ತೂಕದ ವಿಗ್ರಹವನ್ನು ಬುಧವಾರ ಸಂಜೆ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. ಮೂರ್ತಿಯನ್ನು ಒಳಗೆ ತರುವ ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು.
ನಿನ್ನೆ ಸಂಜೆ ರಾಮಲಲ್ಲಾ ಅವರ ಬೆಳ್ಳಿಯ ವಿಗ್ರಹವನ್ನು ಗುಲಾಬಿ ಮತ್ತು ಚೆಂಡು ಹೂಗಳಿಂದ ಅಲಂಕರಿಸಲಾಗಿತ್ತು. ಸಂಜೆ ರಾಮಮಂದಿರದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಜನವರಿ 22 ರ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಚರಣೆಯ ಅಂಗವಾಗಿ ‘ಕಲಶ ಪೂಜೆ’ ನಡೆಯಿತು.
ಬಾಲರಾಮನ ಪ್ರಾಣಪ್ರತಿಷ್ಠಾ ದಿನದಂದು ರಜೆ ನೀಡುವಂತೆ ವಕೀಲರ ಸಂಘ ಮನವಿ
ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ನಡುವೆ ಭಾರತೀಯ ವಕೀಲ ಸಂಘವು (Bar Council) ಮುಖ್ಯ ನ್ಯಾಯಮೂರ್ತಿಗಳಿಗೆ (Chief Justice) ಪತ್ರವೊಂದನ್ನು ಬರೆದಿದೆ.
ಜನವರಿ 22 ರಂದು ರಜಾ ದಿನವನ್ನಾಗಿ ಘೋಷಣೆ ಮಾಡುವಂತೆ ಹಾಗೂ ತುರ್ತು ವಿಚಾರಣೆಯ ಅಗತ್ಯವಿರುವ ವಿಷಯಗಳನ್ನು ವಿಶೇಷ ವ್ಯವಸ್ಥೆಗಳ ಮೂಲಕ ಸರಿ ಹೊಂದಿಸಬಹುದು ಅಥವಾ ಮುಂದಿನ ಕೆಲಸದ ದಿನಕ್ಕೆ ಮುಂದೂಡಬಹುದು ಎಂದು ಪತ್ರ ಬರೆಯುವ ಮೂಲಕ ಮುಖ್ಯ ನ್ಯಾಯಮೂರ್ತಿಗಳ ಬಳಿ ವಕೀಲರ ಸಂಘ ಮನವಿ ಮಾಡಿಕೊಂಡಿದೆ.
ಪತ್ರದಲ್ಲೇನಿದೆ..?: ನೀವು ರಜೆ ನೀಡಿದಲ್ಲಿ ದೇಶಾದ್ಯಂತದ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಲಯದ ನೌಕರರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಮಾರಂಭ ಹಾಗೂ ಇದರ ಸಂಬಂಧಿತ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಈ ಮನವಿಯನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿ ಐತಿಹಾಸಿಕ ಸಂದರ್ಭವನ್ನು ಜನರ ಭಾವನೆಗಳಿಗೆ ಅನುಗುಣವಾಗಿ ಆಚರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಕೀಲರ ಸಂಘವು ವಿನಂತಿಸಿಕೊಂಡಿದೆ.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ದೇಶಾದ್ಯಂತದ ರಾಜಕಾರಣಿಗಳು, ಸಂತರು ಮತ್ತು ಗಣ್ಯರು ಸೇರಿದಂತೆ 7,000 ಕ್ಕೂ ಹೆಚ್ಚು ಜನರು ಅದ್ಧೂರಿ ಉದ್ಘಾಟನೆಗೆ ಹಾಜರಾಗುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ಸುಮಾರು 100 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.