ವಿಶ್ವಕಪ್ ಫೈನಲ್ ಪಂದ್ಯಕ್ಕೆ ನನ್ನನ್ನು ಕರೆದಿಲ್ಲ: ಕಪಿಲ್ ದೇವ್

ಅಹಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಸೆಣಸಾಟದಲ್ಲಿ ಭಾರತ ಸೋಲುವ ಮೂಲಕ ವಿಶ್ವಕಪ್ ಕೈತಪ್ಪಿ ಹೋಗಿದೆ. ಇದರಿಂದಾಗಿ ವಿಶ್ವಕಪ್ ಆರನೇ ಬಾರಿಗೆ ಆಸ್ಟ್ರೇಲಿಯಾದ ಪಾಲಾಗಿದೆ.
ಇದರ ಮಧ್ಯೆ ಕ್ರಿಕೆಟ್ ವಲಯದಿಂದ ಅಪಸ್ವರವೊಂದು ಕೇಳಿ ಬಂದಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಹಿಂದೊಮ್ಮೆ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಪಿಲ್ ದೇವ್ ತಮ್ಮನ್ನು ಈ ಅಂತಿಮ ಪಂದ್ಯಕ್ಕೆ ಆಹ್ವಾನಿಸಿರಲಿಲ್ಲ ಎಂದು ಹೇಳಿದ್ದಾರೆ.
1983ರ ಇಡೀ ತಂಡ ಅಲ್ಲಿರಬೇಕು ಎಂದು ಬಯಸಿದ್ದೆ. ಆದರೆ ಅವರು ನನಗೆ ಆಹ್ವಾನ ನೀಡಿರಲಿಲ್ಲ. ಇದು ಅತಿ ದೊಡ್ಡ ಕಾರ್ಯಕ್ರಮ, ಆಯೋಜಕರು ಅದರ ಆಯೋಜನೆಯಲ್ಲಿ ಬ್ಯುಸಿ ಇರುವುದರಿಂದ ಬಹುಶಃ ಮರೆತುಹೋಗುವ ಸಾಧ್ಯತೆ ಇರುತ್ತದೆ ಎಂದು ನನಗೆ ಗೊತ್ತು ಎಂಬುದಾಗಿಯೂ ಕಪಿಲ್ ಹೇಳಿದ್ದಾರೆ.
ಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ಟಿವಿ ಒಡೆದು ಕಣ್ಣೀರು ಹಾಕಿದ ಕ್ರಿಕೆಟ್ ಅಭಿಮಾನಿಗಳು
ಉತ್ತರಪ್ರದೇಶ: ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿದ ರೀತಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸೋಲಿನ ನಂತರ ಭಾರತೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿದ್ದು, ವಿಶ್ವಕಪ್ ಗೆಲ್ಲುವ ಇಡೀ ಭಾರತದ ಕನಸು ಭಗ್ನಗೊಂಡಿದೆ. ಟೀಂ ಇಂಡಿಯಾದ ಈ ಸೋಲಿಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಉತ್ತರಪ್ರದೇಶದ ಅಲಿಗಢ್ ಮತ್ತು ಲಖಿಂಪುರ ಖೇರಿಯಲ್ಲಿ, ಕೋಪಗೊಂಡ ಕ್ರಿಕೆಟ್ ಅಭಿಮಾನಿಗಳು ಟಿವಿಯನ್ನು ಒಡೆದರೆ, ಇನ್ನು ಅನೇಕ ಅಭಿಮಾನಿಗಳು ಕಣ್ಣೀರು ಹಾಕಿದರು.
2023 ರ ವಿಶ್ವಕಪ್‌ನಲ್ಲಿ ಭಾರತ ಎಲ್ಲಾ ಹತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದ ನಂತರ, ಈ ಬಾರಿಯ ವಿಶ್ವಕಪ್ ಭಾರತದ ಪಾಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಆಗಲಿಲ್ಲ. ಇದರಿಂದ ಕ್ರಿಕೆಟ್ ಪ್ರೇಮಿಗಳು ನಿರಾಶೆಗೊಂಡಿದ್ದಾರೆ. ಟೀಂ ಇಂಡಿಯಾ ಸೋಲಿನ ನಂತರ ಅಲಿಘಢ್‌ನಲ್ಲಿ ವಾಸಿಸುವ ಅಭಿಮಾನಿಯೊಬ್ಬರು ತಮ್ಮ ಟಿವಿಯನ್ನು ಒಡೆದರು. ನಂತರ ಇಂದು ಫೈನಲ್‌ನಲ್ಲಿ ಭಾರತ ಗೆಲ್ಲುತ್ತದೆ ಎಂಬ ಸಂಪೂರ್ಣ ಭರವಸೆ ನಮಗಿತ್ತು, ಆದರೆ ಭಾರತದ ಸೋಲಿಗೆ ನಮ್ಮ ಆತ್ಮ ಅಳುತ್ತಿದೆ ಎಂದರು.
ಅಲಿಘಢ್‌ನಲ್ಲಿ ಟಿವಿ ಒಡೆದ ಪ್ರದೀಪ್ ವರ್ಷ್ನಿ
“ನಾವು ಇಡೀ ದಿನ ಪಂದ್ಯವನ್ನು ನೋಡಿದ್ದೇವೆ, ಭಾರತ ವಿಶ್ವಕಪ್ ಗೆಲ್ಲಬೇಕು ಎಂಬುದು ನಮ್ಮ ಆಸೆಯಾಗಿತ್ತು, ಆದರೆ 140 ಕೋಟಿ ಜನರ ಕನಸು ಭಗ್ನಗೊಂಡಿದೆ, ನಾವು ತುಂಬಾ ಆಘಾತಕ್ಕೊಳಗಾಗಿದ್ದೇವೆ. ನನ್ನ ಜೀವನದಲ್ಲಿ ಎಂದೂ ಅನುಭವಿಸದ ತುಂಬಾ ನೋವು ಅನುಭವಿಸಿದೆ. ನಮ್ಮ ಆತ್ಮ ಅಳುತ್ತಿದೆ, ನಾವೆಲ್ಲರೂ ತುಂಬಾ ದುಃಖಿತರಾಗಿದ್ದೇವೆ. ಭಾರತ ವಿಶ್ವಕಪ್ ಗೆಲ್ಲಬೇಕು ಎಂದು ಬಹಳ ದಿನಗಳಿಂದ ಅಂದುಕೊಂಡಿದ್ದೆವು, ಆದರೆ ಗೆಲ್ಲಲಾಗಲಿಲ್ಲ. ಏನು ಆಗಬೇಕಿತ್ತು ಅದು ಸಂಭವಿಸಿತು. ಆದರೆ ಕೋಪವನ್ನು ಎಲ್ಲೋ ಹೊರಹಾಕಬೇಕು, ಅದಕ್ಕಾಗಿಯೇ ನಾವು ಟಿವಿಯನ್ನು ಒಡೆದಿದ್ದೇವೆ. ನಮ್ಮ ತಂಡವು ತಿಂಗಳುಗಳಿಂದ ಶ್ರಮಿಸುತ್ತಿದೆ” ಎಂದು ದುಃಖ ತೋಡಿಕೊಂಡರು.
ಸಚಿನ್ ಎಂಬ ಕ್ರಿಕೆಟ್ ಪ್ರೇಮಿ, “ಇಂದು ಉತ್ತಮ ಪಂದ್ಯ, ರೋಚಕ ಪಂದ್ಯ, ಆದರೆ ನಾವು ಗೆಲ್ಲಲು ಸಾಧ್ಯವಾಗದಿರುವುದು ಟೀಂ ಇಂಡಿಯಾದ ದೌರ್ಭಾಗ್ಯ, ಭಾರತ ಹತ್ತು ಪಂದ್ಯಗಳನ್ನು ಗೆದ್ದಿದೆ, ಹನ್ನೊಂದನೇ ಪಂದ್ಯವನ್ನೂ ಗೆಲ್ಲುತ್ತದೆ ಮತ್ತು ಗೆಲ್ಲುತ್ತೇವೆ ಎಂದು ನಾವು ಭಾವಿಸಿದ್ದೆವು. ಹಾಗೆ ಆಗಲಿಲ್ಲ. ಅದಕ್ಕಾಗಿಯೇ ನಾವು ಈ ಟಿವಿಯನ್ನು ಒಡೆದು ಹಾಕಿದ್ದೇವೆ. ಅಭಿಮಾನಿಗಳು ಎಲ್ಲರೂ ನಿರಾಶೆಗೊಂಡರು ಮತ್ತು ಟೀಂ ಇಂಡಿಯಾದ ಸೋಲಿನಿಂದ ಟಿವಿಯನ್ನು ಒಡೆದು ಹಾಕಿದೆವು” ಎಂದರು.