ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿದ್ದೇನೆ; ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗೇ ಹೋಗ್ತೀನಿ - ಲಕ್ಷ್ಮಿ ಹೆಬ್ಬಾಳ್ಕರ್
ಉಡುಪಿ: ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ. ರಾಮ, ಕೃಷ್ಣ, ಪರಮೇಶ್ವರನ ಮೇಲೆ ನನಗೆ ವೈಯಕ್ತಿಕವಾಗಿ ಬಹಳ ಭಕ್ತಿ ಇದೆ. ಒಂದಲ್ಲ ಒಂದು ದಿನ ಅಯೋಧ್ಯೆಗೆ ಹೋಗ್ತೀನಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.
ಉಡುಪಿಯಲ್ಲಿ (Udupi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ. ರಾಮ, ಕೃಷ್ಣ, ಪರಮೇಶ್ವರನ ಮೇಲೆ ನನಗೆ ವೈಯಕ್ತಿಕವಾಗಿ ಬಹಳ ಭಕ್ತಿ ಇದೆ. ನಾನು ನಮ್ಮ ಸಂಸ್ಕೃತಿ, ಭಕ್ತಿಯನ್ನು ಆಚರಿಸುತ್ತೇನೆ ಎಂದು ಹೇಳಿದ್ದಾರೆ.
ರಾಮಮಂದಿರ (Ram Mandir) ವಿಚಾರದಲ್ಲಿ ಪಕ್ಷದ ನಡೆಯ ಬಗ್ಗೆ ನಾನು ಮಾತನಾಡಲ್ಲ. ನಾನು ಪಕ್ಷದ ಅಧ್ಯಕ್ಷೆ ಅಲ್ಲ ಅಥವಾ ದೊಡ್ಡ ಸ್ಥಾನದಲ್ಲೂ ಇಲ್ಲ. ಆದ್ರೆ ನಾನಂತೂ ದೈವಿ ಭಕ್ತಳು ಎಂದು ಪದೇ ಪದೇ ಹೇಳುತ್ತೇನೆ. ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗೇ ಹೋಗ್ತೀನಿ. ರಾಮ ಮಂದಿರ ಅವರದ್ದೂ (BJP) ಅಲ್ಲ ನಮ್ಮದೂ ಅಲ್ಲ, ಅಯೋಧ್ಯೆ ರಾಮಮಂದಿರ 140 ಕೋಟಿ ಜನರದ್ದು ಎಂದು ತಿಳಿಸಿದ್ದಾರೆ.
ಟೀಕಿಸುವ ಭರದಲ್ಲಿ ಸಚಿವ ರಾಜಣ್ಣ ಎಡವಟ್ಟು:
ಇನ್ನೂ ಅಯೋಧ್ಯೆ ರಾಮಮಂದಿರ ವಿಚಾರವಾಗಿ ಬಿಜೆಪಿ ನಡೆಯನ್ನು ಟೀಕಿಸುವ ಭರದಲ್ಲಿ ಭಗವಾನ್ ಶ್ರೀರಾಮನನ್ನು ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ (KN Rajanna) ಅವಮಾನಿಸಿದ್ದಾರೆ. ಸಮಾವೇಶವೊಂದರಲ್ಲಿ ಮಾತನಾಡುತ್ತಾ, ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಒಂದು ಟೆಂಟ್ ಅಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಅಂತಾ ಹೇಳ್ತಿದ್ರು. ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು ಎಂದು ಹೇಳಿಕೆ ನೀಡಿದ್ದಾರೆ.
ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರೆ ಅಲ್ಲಿ. ಇನ್ನೊಂದು ಐದಾರು ತಿಂಗಳು ಕಳೀಲಿ ಏನೇನ್ ಬರ್ತವೆ, ಏನೇನು ಅಂತೇಳಿ. ಯಾವತ್ತೂ ಕೂಡ ಶ್ರೀರಾಮ ಎಲ್ಲಾ ಜನರನ್ನ ಆಶೀರ್ವದಿಸುವ ದೇವರು. ಅದಕ್ಕೋಸ್ಕರ ರಾಮರಾಜ್ಯದ ಕಲ್ಪನೆ ಬಂದಿದ್ದು ಎಂದು ತಿಳಿಸಿದ್ದಾರೆ.
ಈಗ ಅದು ಬಿಜೆಪಿ ಶ್ರೀರಾಮನೋ, ಮೋದಿ ಶ್ರೀರಾಮನೋ ನೋಡೋಣ. ಅದು ಏನಾಗುತ್ತೆ ಅಂತಾ. ನಮ್ಮೂರಲ್ಲಿ ನೂರಾರು ವರ್ಷ ಇತಿಹಾಸ ಇರುವಂತಹ, ಪಾವಿತ್ರ‍್ಯವಾಗಿರುವ ಶ್ರೀರಾಮನ ದೇವಸ್ಥಾನಗಳಿವೆ. ಈಗ ಅದನ್ನ ಬಿಟ್ಟು ಇವರು ಚುನಾವಣೆಗೋಸ್ಕರ ದೇವಸ್ಥಾನಗಳನ್ನ ಕಟ್ಟಿ, ಜನರಿಗೆ ಮೋಸ ಮಾಡೋ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.